ಡಿನೋಟಿಫಿಕೇಷನ್‌ ಪ್ರಕರಣ: ಸಿಎಂ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಲು ಹೈಕೋರ್ಟ್‌ ನಕಾರ

ಬೆಂಗಳೂರು: ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಜಯಕುಮಾರ್‌ ಹಿರೇಮಠ್‌ ಎಂಬುವರು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಮೈಕೆಲ್‌ ಡಿ.ಕುನ್ಹಾ ಅವರಿದ್ದ ನ್ಯಾಯಪೀಠ ಇಂದು ಪ್ರಕಟಿಸಿದೆ. 

ಜೊತೆಗೆ, ದೂರಿನ ಸಂಬಂಧ ತನಿಖೆ ಮುಂದುವರಿಸುವಂತೆ ಲೋಕಾಯುಕ್ತಕ್ಕೆ ಸೂಚನೆ ನೀಡಿದೆ. ಇದು ಯಡಿಯೂರಪ್ಪ ಅವರಿಗೆ ಭಾರಿ ಹಿನ್ನೆಡೆಯಾಗಿದೆ.

ಯಡಿಯೂರಪ್ಪ ಅವರು 2015ರಲ್ಲಿ ಆರ್.ಟಿ.ನಗರದ ಗಂಗೇನಹಳ್ಳಿ ವ್ಯಾಪ್ತಿಯ ಮಠದ ಹಳ್ಳಿ ಬಡಾವಣೆಯಲ್ಲಿ 1.1 ಎಕರೆ ಭೂಮಿಯನ್ನು ತಮ್ಮ ಅಧಿಕಾರ ಬಳಸಿ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಲು ಆದೇಶ ನೀಡಿದ್ದಾರೆ ಎಂದು ಆರೋಪಿಸಿ ಜಯಕುಮಾರ್‌ ಹಿರೇಮಠ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. 

ದೂರಿನ ಆರೋಪಗಳ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಆರೋಪಗಳಲ್ಲಿ ಮೇಲ್ನೋಟಕ್ಕೆ ಸತ್ಯಾಂಶ ಕಂಡುಬಂದ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!