ಗ್ರಾಹಕರು ಎಚ್ಚೆತ್ತುಕೊಂಡರೆ ಸುಧಾರಣೆ: ಜಿಲ್ಲಾಧಿಕಾರಿ

ಉಡುಪಿ, ಡಿ.5 : ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಯನ್ನು ಪಡೆಯುವ ಕುರಿತಂತೆ, ಪ್ರತಿಯೊಬ್ಬ ಗ್ರಾಹಕರು ತಮ್ಮ ಹಕ್ಕುಗಳ ಕುರಿತು ಎಚ್ಚೆತ್ತುಕೊಂಡರೇ ಗ್ರಾಹಕ ಜಾಗೃತಿಯಲ್ಲಿ ಸುಧಾರಣೆ ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಅವರು ಮಂಗಳವಾರ, ವೈಕುಂಠ ಬಾಳಿಗಾ ಕಾಲೇಜಿನಲ್ಲಿ, ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ಸಹ ಗ್ರಾಹಕನಾಗಿದ್ದು, ತಾವು ಖರೀದಿಸುವ ಸರಕು ಮತ್ತು ಪಡೆಯುವ ಸೇವೆಗಳಲ್ಲಿ ಯಾವುದೇ ಕೊರತೆ ಉಂಟಾದರೆ, ಗ್ರಾಹಕ ವೇದಿಕೆಗಳ ಮೂಲಕ ಸೂಕ್ತ ಸೇವೆ ಪಡೆಯಲು ಸಾಧ್ಯವಿದೆ. ಗ್ರಾಹಕ ಕಾಯಿದೆ ಮತ್ತು ಹಕ್ಕುಗಳ ಬಗ್ಗೆ ಅರಿತಿರಬೇಕು, ಕಾನೂನು ನೀಡಿರುವ ಗ್ರಾಹಕ ಅಧಿಕಾರಗಳ ಬಗ್ಗೆ ತಿಳಿಯಬೇಕು, ಪ್ರತಿಯೊಬ್ಬ ವ್ಯಾಪಾರಿಯೂ ಸಹ ನಿರ್ದಿಷ್ಟ ಮಾನದಂಡಗಳ ಪ್ರಕಾರ ಗ್ರಾಹಕರಿಗೆ ಸೇವೆ ನೀಡಬೇಕು, ಗ್ರಾಹಕರಿಗೆ ಪ್ರಾಮಾಣಿಕ ಸೇವೆ ನೀಡಿದ್ದಲ್ಲಿ ವ್ಯವಹಾರ ಬೆಳವಣಿಗೆ ಹೊಂದಲಿದೆ. ಮೋಸದ ವ್ಯಾಪಾರ ಹೆಚ್ಚು ಸಮಯ ಇರುವುದಿಲ್ಲ ಎನ್ನುವುದನ್ನು ಪ್ರತೀ ವ್ಯಾಪಾರಿ ಅರಿಯಬೇಕು ಎಂದು ಡಿಸಿ ತಿಳಿಸಿದರು.

ವಸ್ತುಗಳಲ್ಲಿ ಕಲಬೆರಕೆ ಕಂಡುಬಂದರೆ ಸೂಕ್ತ ದಾಖಲೆಗಳೊಂದಿಗೆ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಇತ್ತೀಚಿಗೆ ಜಿಲ್ಲೆಯ ಮೀನುಗಳಲ್ಲಿ ಫಾರ್ಮಾಲಿನ್ ಬಳಕೆ ಕುರಿತಂತೆ ಪರಿಶೀಲನೆ ನಡೆಸಿದ್ದು, ಫಾರ್ಮಾಲಿನ್ ಅಂಶ ಪತ್ತೆಯಾಗಿಲ್ಲ, ಜಿಲ್ಲೆಗೆ ಹೊರರಾಜ್ಯದಿಂದ ಬರುವ ಮೀನುಗಳಲ್ಲಿ ಸಹ ಫಾರ್ಮಾಲಿನ್ ಇರುವ ಬಗ್ಗೆ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ ಎಂದರು.

ಮೊಬೈಲ್ ಕಂಪೆನಿಗಳು 4 ಜಿ ಎಂದು ಇಂಟರ್ನೆಟ್ ಸಂಪರ್ಕ ನೀಡುತ್ತಿದ್ದು, ಇದರಲ್ಲಿ ಎಷ್ಟು ಎಂಬಿಪಿಎಸ್ ವೇಗ ಇದೆ ಎಂದು ಯಾರೂ ಪರಿಶೀಲನೆ ನಡೆಸಿಲ್ಲ, ತಾನು ಮೈಸೂರು ಮಹಾನಗರ ಪಾಲಿಕೆ ಆಯುಕ್ತನಾಗಿದ್ದಾಗ, ಕಚೇರಿಗೆ 4 ಜಿ ಸಂಪರ್ಕ ನೀಡಲು ಕಂಪನಿಯೊಂದು ಮುಂದೆ ಬಂದಿದ್ದು, ಇದರ ಇಂಟರ್ನೆಟ್ ವೇಗ ಪರಿಶೀಲಿಸಿದ್ದು, 4 ಜಿ ಸಂಪರ್ಕಕ್ಕೆ 11.46 ಎಂಬಿಪಿಎಸ್ ಅಗತ್ಯವಿದ್ದು, ಪರಿಶೀಲನೆ ನೆಡೆಸಿದಾಗ ಇದು 0.6 ಎಂಬಿಪಿಎಸ್ ವೇಗ ಹೊಂದಿತ್ತು. ವ್ಯಾಪಾರಿಗಳು ಮಾತ್ರವಲ್ಲದೇ ಸರಕಾರಿ ಸೇವೆ ನೀಡುವ ಅಧಿಕಾರಿಗಳೂ ಸಹ ಗ್ರಾಹಕ ಸೇವೆಯ ವ್ಯಾಪ್ತಿಗೆ ಒಳಪಡಲಿದ್ದು, ನಾಗರೀಕರಿಗೆ ಸಕಾಲದಲ್ಲಿ ಸರಕಾರಿ ಸೇವೆಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಮಾತನಾಡಿ, ಆನ್‌ಲೈನ್ ಶಾಂಪಿಂಗ್‌ನಲ್ಲಿ ಸರಕು ಖರೀದಿಸುವಾಗ ಹೆಚ್ಚಿನ ಮೋಸವಾಗುತ್ತಿದ್ದು, ಇದನ್ನು ನಿಯಂತ್ರಿಸುವುದು ಸವಾಲಾಗಿದೆ. ಮೊಬೈಲ್ ಆಪ್‌ಗಳನ್ನು ಡೌನ್‌ಲೋಡ್ ಮಾಡುವಾಗ ಎಲ್ಲದಕ್ಕೂ ಒಪ್ಪಿಗೆ ನೀಡುವು ಅಗತ್ಯವಿಲ್ಲ ಇದರಿಂದ ಅನಾನುಕೂಲವೇ ಹೆಚ್ಚು. ತೆರಿಗೆ ತಪ್ಪಿಸಲು ಹೋಗಿ ಮೋಸ ಹೋಗಬೇಡಿ. ಖರೀದಿ ಸಂದರ್ಭದಲ್ಲಿ ಸೂಕ್ತ ಬಿಲ್‌ಗಳನ್ನು ಪಡೆಯಿರಿ. ಗ್ರಾಹಕ ಸೇವೆಯಲ್ಲಿ ತೊಂದರೆಯಾದಲ್ಲಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಪಡೆಯುವಂತೆ ತಿಳಿಸಿದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಶೋಭಾ ಮಾತನಾಡಿ, ಗ್ರಾಹಕರು ವಸ್ತು ಮತ್ತು ಸೇವೆಯಲ್ಲಿ ವ್ಯತ್ಯಯವಾದಲ್ಲಿ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಅವಶ್ಯಕತೆಗೆ ಅನುಗುಣವಾಗಿ ಮಾತ್ರ ಖರೀದಿಸಿ, ಸೂಕ್ತ ರಸೀದಿ ಪಡೆಯಿರಿ. ಹೊಸ ಗ್ರಾಹಕರ ಸಂರಕ್ಷಣಾ ಕಾಯಿದೆ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಿದೆ. ಈ ಹಿಂದೆ ಪ್ರಕರಣ ದಾಖಲಿಸುವಾಗ ಆ ವಸ್ತು ತಯಾರಾದ ಸ್ಥಳದಲ್ಲೇ ಪ್ರಕರಣ ದಾಖಲಿಸಬೇಕಿತ್ತು. ಪ್ರಸ್ತುತ ಹೊಸ ಕಾಯಿದೆಯಲ್ಲಿ ನೀವು ವಾಸವಿರುವ ಸ್ಥಳದಲ್ಲೇ ಪ್ರಕರಣ ದಾಖಲಿಸಬಹುದು ಅಲ್ಲದೇ ಪರಿಹಾರ ಪಡೆಯುವ ಮೊತ್ತವೂ ಸಹ ಅಧಿಕವಾಗಿದೆ. ಯಾವುದೇ ವಸ್ತು ಅಥವಾ ಸೇವೆ ಖರೀದಿ ಸಂದರ್ಭದಲ್ಲಿ ಅದರಲ್ಲಿನ ನಿಯಮಗಳನ್ನು ಓದಿ ಅರ್ಥೈಸಿಕೊಳ್ಳುವುದರಿಂದ ವಂಚನೆಗೆ ಒಳಗಾಗುವುವದನ್ನು ತಪ್ಪಿಸಬಹುದು. ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಸೂಕ್ತ ಪರಿಹಾರ ದೊರೆಯದಿದ್ದಲ್ಲಿ, ರಾಜ್ಯ ಗ್ರಾಹಕ ಆಯೋಗ ಮತ್ತು ರಾಷ್ಟ್ರೀಯ ಗ್ರಾಹಕ ಆಯೋಗದಲ್ಲೂ ಸಹ ದೂರು ದಾಖಲಿಸಲು ಅವಕಾಶವಿದೆ, ಮುಂದೆ ಜಿಲ್ಲೆಯಲ್ಲಿ ಗ್ರಾಹಕ ಕೌನ್ಸಿಲ್ ಆರಂಭಗೊಳ್ಳಲಿದ್ದು, ಜಿಲ್ಲಾಧಿಕಾರಿ ಇದರ ಮುಖ್ಯಸ್ಥರಾಗಲಿದ್ದಾರೆ ಎಂದು ಶೋಭಾ ತಿಳಿಸಿದರು.

ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಎ.ಪಿ.ಕೊಡಂಚ ಉಪನ್ಯಾಸ ನೀಡಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ವಿವಿಧ ತೂಕದ ಯಂತ್ರಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲೆ ನಿರ್ಮಲಾ ಕುಮಾರಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ವಿ.ಎಡಕೆ ಉಪಸ್ಥಿತರಿದ್ದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಮೊಹಮ್ಮದ್ ಇಸಾಕ್ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!