ಉಡುಪಿ: ಹಳ್ಳಿ ಹುಡುಗನಿಗೆ ಒಲಿಯಿತು ಅಂತರರಾಷ್ಟ್ರೀಯ ಇಎಫ್ಐಎಪಿ ಪ್ರಶಸ್ತಿ
ಉಡುಪಿ: ಕಲಾತ್ಮಕ ಛಾಯಾಗ್ರಹಣ ಕ್ಷೇತ್ರದಲ್ಲಿ 85ಕ್ಕೂ ಹೆಚ್ಚು ದೇಶಗಳಲ್ಲಿ ಅಂಗ ಸಂಸ್ಥೆ ಹೊಂದಿರುವ ಎಫ್ಐಎಪಿ ಸಂಸ್ಥೆ ಕೊಡಮಾಡುವ ಪ್ರತಿಷ್ಠಿತ ಇಎಫ್ಐಎಪಿ ಡಿಸ್ಟಿಂಕ್ಷನ್ ಪ್ರಶಸ್ತಿ ಪುರಸ್ಕಾರ ಛಾಯಾಗ್ರಾಹಕ ಕೊಡಂಗಳ ಫೋಕಸ್ ರಾಘು ಅವರಿಗೆ ಸಂದಿದೆ.
ಇಎಫ್ಐಎಪಿ ಪುರಸ್ಕಾರಕ್ಕೆ ಅರ್ಹತೆ ಪಡೆಯಲು 20ಕ್ಕೂ ಅಧಿಕ ದೇಶಗಳಲ್ಲಿ ಚಿತ್ರ ಪ್ರದರ್ಶನಗೊಂಡಿರಬೇಕು, 2 ದೇಶಗಳಿಂದ ಪ್ರಶಸ್ತಿ ಪಡೆದಿರಬೇಕು ಹಾಗೂ 250 ಚಿತ್ರಗಳು ಪ್ರಶಸ್ತಿಗೆ ಆಯ್ಕೆಯಾಗಿರಬೇಕು ಎಂಬ ನಿಯಮಗಳನ್ನು ವಿಧಿಸಲಾಗಿತ್ತು. ಇದುವರೆಗೂ 25ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವುದನ್ನು ಗಣನೆಗೆ ತೆಗೆದುಕೊಂಡು ಪ್ರಶಸ್ತಿ ನೀಡಲಾಗಿದೆ.
ಕರಾವಳಿಯಲ್ಲಿ ಈ ಗೌರವ ಪಡೆದ ಮೊದಲ ಛಾಯಾಗ್ರಾಹಕ ಎಂಬ ಹೆಗ್ಗಳಿಕೆ ಸಂತಸ ತಂದಿದೆ ಎಂದು ಫೋಕಸ್ ರಾಘು ತಿಳಿಸಿದ್ದಾರೆ.