2021ರಲ್ಲಿ ಭಾರತೀಯರಿಗೆ ಗ್ರಹಣಗಳೇ ಇಲ್ಲದ ವರ್ಷ!

ಹೊಸ ವರ್ಷ 2021ರ ಆಕಾಶ ವಿದ್ಯಾಮಾನಗಳು ಆಶ್ಚರ್ಯವೆಂದರೆ, ಈ ಬರುವ 2021ರಲ್ಲಿ ಭಾರತೀಯರಿಗೆ ಗ್ರಹಣಗಳೇ ಇಲ್ಲ. ಇರಲಿಕ್ಕೆ ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸುತ್ತವೆ. ಮೇ 26 ಕ್ಕೆ ಖಗ್ರಾಸ ಚಂದ್ರಗ್ರಹಣ, ನವೆಂಬರ್ 19ಕ್ಕೆ ಪಾರ್ಶ್ವ ಚಂದ್ರಗ್ರಹಣ, ಜೂನ್ 10ಕ್ಕೆ ಕಂಕಣ ಸೂರ್ಯ ಗ್ರಹಣ, ಹಾಗೂ ಡಿಸೆಂಬರ್ 4 ಕ್ಕೆ ಖಗ್ರಾಸ ಸೂರ್ಯ ಗ್ರಹಣಗಳು ಸಂಭವಿಸುತ್ತವೆಯಾದರೂ ಭಾರತದವರಿಗೆ ಇವು ಗೋಚರಿಸುವುದಿಲ್ಲ.

ಇನ್ನೊಂದು ವಿಶೇಷ ವೆಂದರೆ, ಈ ವರ್ಷ  ನಾಲ್ಕು ಸೂಪರ್ ಮೂನ್ ಗಳು. ಹುಣ್ಣಿಮೆ ಗಳಲ್ಲೇ ಸೂಪರ್ ಮೂನ್ ಗಳಲ್ಲಿ ಚಂದ್ರ ದೊಡ್ಡದಾಗಿ ಕಾಣುತ್ತಾನೆ.ಮಾರ್ಚ್ 28, ಎಪ್ರಿಲ್ 27, ಮೇ 26, ಹಾಗೂ ಜೂನ್ 24. ಈ ಎಲ್ಲಾ ಹುಣ್ಣಿಮೆಗಳೂ ಚಂದ್ರ ಸುಮಾರು 25 ಅಂಶ ದೊಡ್ಡದಾಗಿ ಕಾಣುವ ಸೂಪರ್ ಮೂನ್ ಗಳು.

ಪ್ರತೀ ವರ್ಷ ಸಂಭವಿಸುವ  ಮಾಮೂಲಿ 15 ಉಲ್ಕಾಪಾತಗಳಲ್ಲಿ  ಈ ವರ್ಷ ಕೆಲವೇ ಉಲ್ಕಾಪಾತಗಳು  ಪ್ರಮುಖವಾದವುಗಳು. ಜನವರಿ 4 ರ ಕ್ವಾಡ್ರಂಟಿಡ್ ಉಲ್ಕಾಪಾತ, ಗಂಟೆಗೆ ಅಂದಾಜು ಸುಮಾರು 120, ಆಗಸ್ಟ್ 12 ರ ಪರ್ರ್ಸಿಡ್ ಉಲ್ಕಾಪಾತ ಗಂಟೆಗೆ 150 ಹಾಗೂ ಡಿಸೆಂಬರ್ 14 ರ ಜಿಮಿನಿಡ್ ಉಲ್ಕಾಪಾತಗಳು.

ಪ್ರತೀ ವರ್ಷಕ್ಕೊಮ್ಮೆ ಚೆಂದ ವಾಗಿ ದೊಡ್ಡದಾಗಿ ಕಾಣುವ ಗುರು  ಹಾಗೂ ಶನಿಗ್ರಹಗಳು ,  ಆಗಸ್ಟ್ 2 ರಂದು ಶನಿಗ್ರಹ ( Saturn opposition) ಹಾಗೂ ಆಗಸ್ಟ್ 20 ಗುರುಗ್ರಹ (Jupiter opposition) ರಾತ್ರಿ ಇಡೀ ಕಾಣಲಿವೆ. ಆಗಸ್ಟ್ ತಿಂಗಳಲ್ಲಿ ಈ ಎರಡೂ ಗ್ರಹಗಳು ಅದ್ಭುತವಾಗಿ ಕಾಣಲಿವೆ .

ಎಪ್ರಿಲ್ 27ರಂದು ಮಂಗಳ ನನ್ನೇ ಚಂದ್ರ ಅಡ್ಡವಾಗಿ ಮರೆಮಾಚುವ ಕೌತುಕ( lunar occultation of Mars )  ನಡೆಯಲಿದೆ. ಫೆಬ್ರವರಿ ಮೊದಲ ವಾರದ ವರೆಗೆ ಬೆಳಗಿನ ಜಾವ ಕಾಣುವ ಶುಕ್ರ ನಂತರ, ಎಪ್ರಿಲ್ 21ರಿಂದ  ಇಡೀ ವರ್ಷ ಪಶ್ಚಿಮ ಆಕಾಶದಲ್ಲಿ ಸಂಜೆ ಗೋಚರಿಸಲಿದೆ. ಸುಮಾರು 584 ದಿನಗಳಿಗೊಮ್ಮೆ ಸಂಜೆಯ ಆಕಾಶದಲ್ಲಿ    ಚೆಂದವಾಗಿ ದೊಡ್ಡ ದಾಗಿ ಕಾಣುವ ಶುಕ್ರ ಗ್ರಹ, ಅಕ್ಟೋಬರ್ 29ರಂದು 47 ಡಿಗ್ರಿ ಎತ್ತರದಲ್ಲಿ ಪಶ್ಚಿಮ ಆಕಾಶದಲ್ಲಿ ಕಾಣಲಿದೆ.

ಬುಧ ಗ್ರಹವನ್ನು ನೋಡಲು ಬಲು ಕಷ್ಟ. ವರ್ಷದಲ್ಲಿ ಬರೇ ಹೆಚ್ಚೆಂದರೆ ಆರು ಬಾರಿ , ಒಂದು ವಾರ ಕಾಲ ಕಾಣುವ ಬುಧ ಗ್ರಹ ಈ ವರ್ಷ, ಜನವರಿ 24, ಮೇ 17, ಸೆಪ್ಟೆಂಬರ್ 14, ಸಂಜೆಯ ಸೂರ್ಯಾಸ್ತ ವಾದ ಕೆಲ ನಿಮಿಷಗಳು  ಪಶ್ಚಿಮ ಆಕಾಶದಲ್ಲಿ ಕಂಡರೆ, ಮಾರ್ಚ್ 6,  ಜುಲೈ 4, ಹಾಗೂ ಅಕ್ಟೋಬರ್ 25 ರಲ್ಲಿ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಕಾಣುತ್ತದೆ. ಸೂರ್ಯನ ಸುತ್ತ ಧೀರ್ಘ ವ್ರತ್ತಾಕಾರದಲ್ಲಿ ಸುತ್ತುವ ಭೂಮಿ ಜನವರಿ 2 ರಂದು ಸಮೀಪದಲ್ಲಿದ್ದರೆ ( ಪೆರಿಜಿ) ಜುಲೈ 6ರಂದು  ದೂರದಲ್ಲಿ ( ಅಪೊಜಿ ) ಯಲ್ಲಿರುತ್ತದೆ.ಇವೆಲ್ಲ ಈ ವರ್ಷ ದ ಆಕಾಶ ವಿಶೇಷಗಳು.

ಡಾ. ಎ. ಪಿ. ಭಟ್ ಉಡುಪಿ

Leave a Reply

Your email address will not be published. Required fields are marked *

error: Content is protected !!