ರಾತ್ರಿ ಕರ್ಫ್ಯೂ: ಟೀಕೆಗಳಿಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಖಡಕ್ ಉತ್ತರ
ಬೆಂಗಳೂರು: ರೂಪಾಂತರ ಗೊಂಡಿರುವ ಕೊರೋನಾ ವೈರಸ್ ರಾಜ್ಯದಲ್ಲಿ ಹರಡದಂತೆ ಮುಂಜಾಗೃತಾ ಕ್ರಮವಾಗಿ ಸರಕಾರ ಹೊರಡಿಸಿದ ರಾತ್ರಿ ಕರ್ಫ್ಯೂಗೆ ವ್ಯಕ್ತವಾಗಿರುವ ಟೀಕೆಗಳಿಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಖಡಕ್ ಉತ್ತರ ನೀಡಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಕೊರೋನಾ ರಾತ್ರಿ ಮಾತ್ರ ಬರುತ್ತಾ ಅಥವಾ ಯಾವ ಹೊತ್ತಿಗೆ ಬರುತ್ತದೆ ಎಂಬ ಬಗ್ಗೆ ಸರಕಾರಕ್ಕೆ ಅರಿವಿದೆ. ರಾತ್ರಿ ಪಾರ್ಟಿ , ಹೊಸ ವರ್ಷ ಆಚರಣೆ ಎಲ್ಲವನ್ನು ನಿಲ್ಲಿಸಬೇಕಿದೆ. ಬಹಳ ಯೋಚನೆ ಮಾಡಿ ವಿವೇಚನೆಯಿಂದಲೆ ಈ ನೈಟ್ ಕರ್ಫ್ಯೂ ಜಾರಿ ಮಾಡಿದ್ದೇವೆ. ಹೇಳುವವರು ಜಾರಿ ಮಾಡಿದರೂ ಹೇಳ್ತಾರೆ, ಮಾಡದಿದ್ದರೂ ಹೇಳ್ತಾರೆ. ನೀವು ಹೇಳ್ತಿರಾ, ವಿರೋಧ ಪಕ್ಷದವರು ಕೂಡ ಹೇಳ್ತಾರೆ ಎಂದು ತಕ್ಕ ಉತ್ತರ ನೀಡಿದ್ದಾರೆ. ಇದೇ ವೇಳೆ ಮಾತು ಮುಂದುವರೆಸಿದ ಅವರು, ಇಂತಹ ಮಾರಕ ಸೋಂಕನ್ನು ನಿಯಂತ್ರಿಸುವಲ್ಲಿ ಯುಕೆಯಲ್ಲಿ ನೈಟ್ ಕರ್ಫ್ಯೂ ಯಶಸ್ವಿಯಾಗಿದೆ. ಹೆಚ್ಚು ಜನ ಜಂಗುಳಿ ಸೇರುವಂತಹ ಪಾರ್ಟಿ ಮೋಜು-ಮಸ್ತಿ ನಿಯಂತ್ರಣವಾಗಬೇಕು. ಜೊತೆಗೆ ಆರ್ಥಿಕ ಸ್ಥಿತಿಗತಿಯ ಬಗ್ಗೆಯೂ ನೋಡಬೇಕಾಗಿದೆ. ಇವುಗಳನ್ನೆಲ್ಲಾ ಆಲೋಚನೆ ಮಾಡಿಯೇ ರಾತ್ರಿ ಕರ್ಫ್ಯೂ ಜಾರಿಗೆ ತಂದಿರುವುದು. ವ್ಯಾಪಾರಿಗಳು ಕರ್ಫ್ಯೂ ಗೆ ತಯಾರಿ ಮಾಡಿಕೊಳ್ಳಲು ಒಂದು ದಿನದ ಸಮಯ ಕೇಳಿದ್ರು. ಹಾಗಾಗಿ ನಿನ್ನೆಯ ಕರ್ಫ್ಯೂ ಇಂದು ರಾತ್ರಿಗೆ ಬದಲಿಸಲಾಗಿದೆ ಎಂದು ತಿಳಿಸಿದರು. ಇದೇ ವೇಳೆ, ನೈಟ್ ಕರ್ಫ್ಯೂಗೆ ವಿರೋಧ ಪಕ್ಷಗಳು ವಿರೋಧಿಸಿರುವ ಬಗ್ಗೆ ಮಾತನಾಡಿದ ಅವರು, ವಿರೋಧ ಪಕ್ಷಗಳು ಯಾವತ್ತು ವಿರೋಧ ಮಾಡಿಲ್ಲ ಹೇಳಿ. ಆರಂಭದಿಂದಲು ಸಹಕಾರ ಕೊಡುತ್ತಿದ್ದೀವಿ ಅಂತ ವಿರೋಧ ಮಾಡುತ್ತಲೇ ಬಂದಿದ್ದಾರೆ. ಬೆಂಬಲ ಕೊಡ್ತಾರೆ ಅನ್ನೋ ನಂಬಿಕೆ ಕೂಡ ಇಲ್ಲ ಎಂದು ಗರಂ ಆಗಿಯೇ ಪ್ರತಿಕ್ರಿಯೆ ನೀಡಿದರು. ಇನ್ನು ರಾಜ್ಯದಲ್ಲಿ ಶಾಲೆಗಳ ಆರಂಭದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳು ಹೇಳಿದ್ದಾರೆ, ಜನವರಿ 1 ರಿಂದ ಶಾಲೆ ಆರಂಭದಲ್ಲಿ ಯಾವುದೆ ಬದಲಾವಣೆ ಇಲ್ಲ. ಆದರೆ ಇಂಗ್ಲೆಂಡ್ ನಿಂದ ಬಂದವರಲ್ಲಿ ರೂಪಾಂತರ ವೈರೆಸ್ ಕಂಡು ಬಂದರೆ ಡಿ. 28-29 ರ ವೇಳೆಗೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. |