ರಾತ್ರಿ ಕರ್ಫ್ಯೂ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತ

ಬೆಂಗಳೂರು: ರೂಪಾಂತರಗೊಂಡಿರುವ  ಕೊರೋನಾ ವೈರಸ್  ರಾಜ್ಯದಲ್ಲಿ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಸರಕಾರ  ಹೊರಡಿಸಿರುವ ರಾತ್ರಿ ಕರ್ಫ್ಯೂ ಭಾರೀ ಟೀಕೆಗೆ ಗುರಿಯಾಗಿದೆ. 

ಈಗಾಗಲೇ ಬ್ರಿಟನ್ ನಲ್ಲಿ ಪತ್ತೆಯಾಗಿರುವ ರೂಪಾಂತರಗೊಂಡ ಕೊರೋನಾ ವೈರಸ್ ರಾಜ್ಯದಲ್ಲಿ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್’ನ್ನು ತಡೆಗಟ್ಟುವ ಸಲುವಾಗಿ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಬುಧವಾರ ಬೆಳಿಗ್ಗೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚಿಸಿ, ಸಮಿತಿಯ ಶಿಫಾರಸುಗಳನ್ನು ಆಧರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಈ ಕುರಿತಾಗಿ ಚರ್ಚೆ ನಡೆಸಿದ್ದಾರೆ. 

 ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಹೊಸ ವೈರಾಣುವಿಗೆ ವೇಗವಾಗಿ ಹರಡುವ ಲಕ್ಷಣ ಇರುವುದರಿಂದ ರಾಜ್ಯದಲ್ಲಿ ಇದನ್ನು ಸಮರ್ಥವಾಗಿ ನಿಯಂತ್ರಿಸಲು ಜನವರಿ 1ರವರೆಗೆ ರಾತ್ರಿ ಕರ್ಫ್ಯೂ ಘೋಷಿಸಲಾಗುತ್ತಿದೆ. ಹೀಗಾಗಿ ಅಗತ್ಯ ಸೇವೆ, ತುರ್ತು ಅಗತ್ಯಗಳಿಗೆ ಹೊರತುಪಡಿಸಿ ಅನಗತ್ಯವಾಗಿ ಯಾರೂ ರಾತ್ರಿ ವೇಳೆ ಸಂಚಾರ ಮಾಡುವಂತಿಲ್ಲ. ಈ ಬಗ್ಗೆ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯನ್ನು ಪ್ರತೀಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದ್ದರು.

ಇದೀಗ ರಾಜ್ಯ ಸರಕಾರದ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದು, ಕರ್ಫ್ಯೂ ಜಾರಿ ಮಾಡುವುದರಿಂದ ಯಾವ ರೀತಿಯ ಪ್ರಯೋಜನವಾಗುತ್ತದೆ ಎಂದು ವಿವರಿಸವಂತೆ ಸಾಕಷ್ಟು ಜನರು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಮಾಧ್ಯಮಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ನಿರ್ಧಾರಗಳನ್ನು ತೆಗೆದುಕೊಂಡಿದೆ ಎನ್ನುವಂತಹ  ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದ್ದು, ಈಗಾಗಲೇ ಜನರು ಪರಿಸ್ಥಿತಿಯೊಂದಿಗೆ ಹೊಂದಿಕೊಂಡು ಹೋಗುವುದನ್ನು ಕಲಿತಿದ್ದಾರೆ.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ. ಇದನ್ನೇ ಪಾಲನೆ ಮಾಡಿದರೆ ಸಾಕು. ಕೊರೋನಾ ರಾತ್ರಿ ಹೊತ್ತು ಮಾತ್ರ ಓಡಾಡುತ್ತದೆಯೇ ಎಂದು ವ್ಯಂಗ್ಯವಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!