ಬಡವರ, ಅಸಾಯಕರ ಕಲ್ಯಾಣಕ್ಕೆ ಹೊಸ ಹೆಜ್ಜೆ: ಉಡುಪಿ ಧರ್ಮಪ್ರಾಂತ್ಯ ಹಾಗೂ MDS ಚಾರೀಟಿಸ್ ನಡುವೆ ಒಪ್ಪಂದಕ್ಕೆ ಸಹಿ

ಉಡುಪಿ: ಮೈಕಲ್ ಡಿಸೋಜಾ ಚಾರಿಟೀಸ್ ಮತ್ತು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ನಡುವೆ ಬಡವರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮುಂದಿನ ಐದು ವರ್ಷಗಳಿಗಾಗಿ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ಗುರುವಾರ ಉಡುಪಿ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆಯಿತು.

ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿ ಫರ್ಡ್ ಡಿಸೋಜಾ ಹಾಗೂ ಎಮ್ ಡಿ ಎಸ್ ಚಾರಿಟೀಸ್ ಮುಖ್ಯಸ್ಥರಾದ ಮೈಕಲ್ ಡಿಸೋಜಾ ಅವರು ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

ಈ ವೇಳೆ ಮಾತನಾಡಿದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಡಿಸೋಜಾ ಬಡವರ ಮತ್ತು ಅಶಕ್ತರ ಕಣ್ಣೀರು ಒರೆಸುವ ಕಾಯಕದಲ್ಲಿ ಉಡುಪಿ ಧರ್ಮಪ್ರಾಂತ್ಯ ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ತನ್ನ ಸೇವೆಯನ್ನು ನೀಡುತ್ತಾ ಬಂದಿದೆ. ಈ ಕಾಯಕಕ್ಕೆ ಉದ್ಯಮಿ ಕೊಡುಗೈ ದಾನಿಗಳಾದ ಮೈಕಲ್ ಡಿಸೋಜಾ ಅವರು ಧರ್ಮಪ್ರಾಂತ್ಯದೊಂದಿಗೆ ಕೈಜೋಡಿಸಿದ್ದು ಈ ಮೂಲಕ ಮತ್ತಷ್ಟು ಸೇವೆ ನೀಡಲು ಸಾಧ್ಯವಾಗಲಿದೆ. ಕಳೆದ 15 ವರ್ಷಗಳಲ್ಲಿ ಶಿಕ್ಷಣ, ಬಡವರಿಗೆ ಮನೆ ನಿರ್ಮಾಣ ಸೇರಿದಂತೆ ಹಲವಾರ ಯೋಜನೆಗಳಿಗೆ ಎಮ್ ಡಿ ಎಸ್ ಚಾರಿಟೀಸ್ ಮೂಲಕ ಸುಮಾರು 13 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿದೆ.

ಸಮುದಾಯದ ಹಿಂದುಳಿದ ಮಕ್ಕಳನ್ನು ಪ್ರೋತ್ಸಾಹಿಸುವುದರೊಂದಿಗೆ ಅವರಿಗೆ ಜೀವನದಲ್ಲಿ ಯಶಸ್ಸು ಕಾಣಲು ಸಹಕಾರ ನೀಡಿದಂತಾಗುತ್ತದೆ. ಇದರೊಂದಿಗೆ ಬಡ ಕುಟುಂಬಗಳ ನೋವಿನಲ್ಲಿ ಸಹಾಯ ಹಸ್ತ ಚಾಚುವ ಕೆಲಸ ಇನ್ನಷ್ಟು ಯಶಸ್ವಿಯಾಗಿ ಮುಂದುವರೆಯಲಿದೆ ಎಂದರು.
ಎಮ್ ಡಿ ಎಸ್ ಚಾರಿಟೀಸ್ ಮುಖ್ಯಸ್ಥರಾದ ಮೈಕಲ್ ಡಿಸೋಜಾ ಮಾತನಾಡಿ ಹೆತ್ತ ತಾಯಿ, ಹುಟ್ಟಿದ ಊರು ಮತ್ತು ಮಾತೃ ಭಾಷೆಯನ್ನು ನಾವು ಎಂದಿಗೂ ಮರೆಯಬಾರದು. ಈ ನಿಟ್ಟಿನಲ್ಲಿ ತಮ್ಮ ಟ್ರಸ್ಟಿನ ಮೂಲಕ ಸಮುದಾಯದ ಅಶಕ್ತರನ್ನು ಮೇಲೆತ್ತುವ ಕಾಯಕ ಮಾಡಿಕೊಂಡು ಬಂದಿರುವುದು ತನಗೆ ಹಾಗೂ ನನ್ನ ಕುಟುಂಬಕ್ಕೆ ಸಮಾಧಾನ ಮತ್ತು ನೆಮ್ಮದಿಯನ್ನು ನೀಡಿದೆ. ಸಮುದಾಯದ ಮಕ್ಕಳು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಏರಬೇಕು ಈ ಮೂಲಕ ಹೆಚ್ಚಿನ ಸಾಧನೆ ಮಾಡಲು ಮುಂದೆಯೂ ಧರ್ಮಪ್ರಾಂತ್ಯದೊಂದಿಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ಹೇಳಿದರು.

ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಡೆನಿಸ್ ಡೆಸಾ ಕಳೆದ 15 ವರ್ಷಗಳಲ್ಲಿ ಎಮ್ ಡಿ ಎಸ್ ಚಾರಿಟೀಸ್ ಮೂಲಕ ಧರ್ಮಪ್ರಾಂತ್ಯದ ಎಡ್ಯುಕೇರ್ ಶೈಕ್ಷಣಿಕ ಸಹಾಯ, ಮನೆ ನಿರ್ಮಾಣಕ್ಕೆ ಅನುದಾನ, ಮೂರನೇ ಮಗುವಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಲಭಿಸಿದ ಅನುದಾನದ ಸಚ್ಚಿತ್ರ ಮಾಹಿತಿಯನ್ನು ನೀಡಿದರು.

ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಅತಿ ವಂ ಫ್ರಾನ್ಸಿಸ್ ಎಫ್ ಲೂವಿಸ್, ಕುಲಪತಿ ವಂ. ಸ್ಟೀವನ್ ಡಿಸೋಜಾ, ಜುಡಿಶೀಯಲ್ ವಿಕಾರ್ ವಂ. ಡಾ. ರೋಶನ್ ಡಿಸೋಜಾ, ಸಂಪದ ನಿರ್ದೇಶಕರಾದ ವಂ. ರೆಜಿನಾಲ್ಡ್ ಪಿಂಟೊ, ಸೆನೆಟ್ ಸಭೆಯ ಸಹಕಾರ್ಯದರ್ಶಿ ವಂ. ವಿಲ್ಸನ್ ಡಿಸೋಜಾ, ಶಿರ್ವ ವಲಯ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್ ಎಮ್ ಡಿ ಎಸ್ ಚಾರಿಟೀಸ್ ನ ಫ್ಲೇವಿ ಡಿಸೋಜಾ, ಲೈನಲ್ ಆರಾನ್ಹಾ, ಓಸ್ವಲ್ಡ್ ರೊಡ್ರಿಗಸ್, ಶುಭಾ ರೊಡ್ರಿಗಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!