ಕೊಡಿ ಹಬ್ಬದಲ್ಲಿ ಚಿನ್ನದ ಕರಿಮಣಿ ಸರ ಕಳವು: ಖತರ್ನಾಕ್ ಕಳ್ಳಿಯರ ಸಹಿತ ಐವರ ಬಂಧನ
ಕುಂದಾಪುರ: ಕೋಟೇಶ್ವರ ಕೊಡಿ ಹಬ್ಬದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಜನಸಂದಣಿಯ ಲಾಭ ಪಡೆದು ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು ₹6 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರ, ಕಳ್ಳತನಕ್ಕೆ ಬಳಸಿದ್ದ ಅಂದಾಜು ₹3 ಲಕ್ಷ ಮೌಲ್ಯದ ಕಾರು ಹಾಗೂ 7 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದೇವಸ್ಥಾನದ ಊಟದ ಸರತಿ ಸಾಲಿನಲ್ಲಿ ಸರ ಕಳವು
ನ.24ರಂದು ಗೀತಾ ಎಂಬವರು ತಮ್ಮ ಪತಿಯೊಂದಿಗೆ ಔಷಧ ತರಲು ಕುಂದಾಪುರಕ್ಕೆ ತೆರಳಿದ್ದರು. ಕೋಟೇಶ್ವರದಲ್ಲಿ ಕೊಡಿ ಹಬ್ಬ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೋಟೇಶ್ವರ ಬೈಪಾಸ್ನಲ್ಲಿ ಬಸ್ನಿಂದ ಇಳಿದು ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದರು.
ಸುಮಾರು ಬೆಳಗ್ಗೆ 11.30ಕ್ಕೆ ದೇವರ ದರ್ಶನ ಪಡೆದು ಪ್ರದಕ್ಷಿಣೆ ಹಾಕಿದ ಬಳಿಕ, ಮಧ್ಯಾಹ್ನ 12.30ರ ಸುಮಾರಿಗೆ ದೇವಸ್ಥಾನದ ಪೌಳಿಯ ಹೊರಭಾಗದಲ್ಲಿ ಊಟದ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ, ಅಪರಿಚಿತ ವ್ಯಕ್ತಿಗಳು ಅವರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಸೆಳೆದುಕೊಂಡು ಪರಾರಿಯಾಗಿದ್ದರು.
ಕಳವಾದ ಚಿನ್ನದ ಸರದ ಅಂದಾಜು ಮೌಲ್ಯ ₹6 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2026, ಕಲಂ 305 BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಐವರು ಆರೋಪಿಗಳ ಬಂಧನ
ಪ್ರಕರಣದ ತನಿಖೆ ಮುಂದುವರಿಸಿದ ಕುಂದಾಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು:
- ಭಾಗ್ಯ (39), ಕುಶಾಲನಗರ, ಕೊಡಗು ಜಿಲ್ಲೆ
- ಅಶ್ವಿನಿ ಎಲ್. ಅಲಿಯಾಸ್ ಗಾಯತ್ರಿ (25), ತಿರುವಣ್ಣಾಮಲೈ ಜಿಲ್ಲೆ, ತಮಿಳುನಾಡು
- ಕಾಮಾಚಿ (50), ತಿರುವಣ್ಣಾಮಲೈ ಜಿಲ್ಲೆ, ತಮಿಳುನಾಡು
- ಆದಮ್ಮಾಳ್ ಅಲಿಯಾಸ್ ಆದ್ಯಾಮ್ಮ (49), ಕೃಷ್ಣಗಿರಿ ಜಿಲ್ಲೆ, ತಮಿಳುನಾಡು
- ಎಸ್. ನಾಗರಾಜ (48), ಕುಶಾಲನಗರ, ಕೊಡಗು ಜಿಲ್ಲೆ
ಎಂದು ಗುರುತಿಸಲಾಗಿದೆ.
ಕಾರು, ಚಿನ್ನದ ಸರ ಹಾಗೂ ಮೊಬೈಲ್ಗಳು ವಶ
ಆರೋಪಿತರಿಂದ ಕಳವು ಮಾಡಿದ್ದ ಚಿನ್ನದ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ್ದ ಬೆಳ್ಳಿ ಬಣ್ಣದ ಕೆಎ 01 ಎಂಆರ್ 7991 ನೋಂದಣಿ ಸಂಖ್ಯೆಯ ಮಹೀಂದ್ರಾ ಟಿಯುವಿ 300 ಕಾರು ಹಾಗೂ 7 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಕಾರಿನ ಅಂದಾಜು ಮೌಲ್ಯ ₹3 ಲಕ್ಷ ಎಂದು ತಿಳಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸ್ ತಂಡದ ಕಾರ್ಯಾಚರಣೆ
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ಕುಂದಾಪುರ ಪೊಲೀಸ್ ಠಾಣೆಯ ನಿರೀಕ್ಷಕ ಜಯರಾಮ್ ಡಿ. ಗೌಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಠಾಣೆಯ ಪಿಎಸ್ಐ ನಂಜಾನಾಯ್ಕ್ ಎನ್. (ಕಾ&ಸು), ಪಿಎಸ್ಐ ಪುಷ್ಪ (ತನಿಖೆ) ಹಾಗೂ ಸಿಬ್ಬಂದಿಗಳಾದ ಮೋಹನ, ಸಂತೋಷಕುಮಾರ್, ಮಹಾಬಲ ಶೆಟ್ಟಿಗಾರ, ಚಂದ್ರಶೇಖರ ಅರೆಶಿರೂರು, ಘನಶ್ಯಾಮ್, ಸಂತೋಷ ದೇವಾಡಿಗ, ಗೌತಮ, ಲೋಹಿತ್, ನಾರಾಯಣ, ಪದ್ಮಾವತಿ, ರೇವತಿ, ಚಾಲಕ ಎ.ಆರ್.ಎಸ್.ಐ ರಾಜು ಭೋವಿ, ಖಾಸಿಮ್ ಜಮಾದಾರ್ ಹಾಗೂ ಆರ್ಡಿಸಿ ವಿಭಾಗದ ದಿನೇಶ್ ಮತ್ತು ನಿತೀನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು





