ಉಡುಪಿ: ಡಿ.5-6 ರಂದು ‘ಕ್ರಿಸ್ಮಸ್ ಡಿಲೈಟ್ಸ್ -2026’ ಮೆಗಾ ಉತ್ಸವ
ಉಡುಪಿ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ ಕುಂಜಿಬೆಟ್ಟು ಇವರ ಆಶ್ರಯದಲ್ಲಿ ಡಿಸೆಂಬರ್ 5 ಮತ್ತು 6 ರಂದು ‘ಕ್ರಿಸ್ಮಸ್ ಡಿಲೈಟ್ಸ್ -2026’ ಮೆಗಾ ಉತ್ಸವವನ್ನು ಉಡುಪಿಯ ಮಿಷನ್ ಕಂಪೌಂಡ್ ಮೈದಾನದಲ್ಲಿ ಪ್ರಪ್ರಥಮ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕ್ರಿಸ್ಮಸ್ ಡೀಲೈಟ್ಸ್ ಮೆಗಾ ಉತ್ಸವದಲ್ಲಿ ವಿವಿಧ ಆಹಾರ ಮಳಿಗೆಗಳು, ಕೃಷಿ ಸಂಬಂಧಿತ, ವಾಹನ, ಆಟಿಕೆಗಳ, ಕರಕುಶಲ ವಸ್ತುಗಳು, ಹಬ್ಬದ ಆಚರಣೆಗೆ ಬೇಕಾದ ವಸ್ತುಗಳಾದ ಕ್ರಿಸ್ಮಸ್ ಟ್ರೀ, ಕ್ರಿಸ್ಮಸ್ ಕೇಕ್ ಸಹಿತ ಇತರ ಡೆಕೋರೇಶನ್ ಸಂಗ್ರಹದ ವಿವಿಧ ರೀತಿಯ ಮಳಿಗೆಗಳೊಂದಿಗೆ ಕ್ರಿಸ್ಮಸ್ ಉತ್ಸವದ ರಸದೌತಣ ಸಾರ್ವಜನಿಕರಿಗೆ ಒಂದೇ ಸ್ಥಳದಲ್ಲಿ ಲಭ್ಯವಾಗಲಿದೆ. ಎರಡು ದಿನಗಳಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 10.30 ರ ತನಕ ಉತ್ಸವ ಮೇಳ ಸಾರ್ವಜನಿಕರ ಭೇಟಿಗೆ ಲಭ್ಯವಿದೆ.
ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡ ಆಯೋಜಿಸಲಾಗಿದ್ದು, ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಡಿ.5 ಶನಿವಾರ ಸಂಜೆ 6 ಗಂಟೆಯಿಂದ ಅಂತರಾಷ್ಟ್ರೀಯ ಖ್ಯಾತಿಯ ಗೋವಾದ ಖ್ಯಾತ ಸಂಗೀತಗಾರ ಮಾರ್ಕ್ ರೆವ್ಲೊನ್ ಆಗಮಿಸಲಿದ್ದು, ಹೆಸರಾಂತ ಸಿಲ್ವರ್ ಟೋನ್ಸ್ ಬ್ಯಾಂಡ್ ಮೂಲಕ ಸಂಗೀತ ಸಂಜೆಯಲ್ಲಿ ತಮ್ಮ ಪ್ರದರ್ಶನವನ್ನು ನೀಡಲಿದ್ದು, ಉಡುಪಿಯ ಜನತೆಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿದ್ದಾರೆ.
ಡಿಸೆಂಬರ್ 6 ರಂದು ಭಾನುವಾರ ಮಕ್ಕಳಿಗಾಗಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಪ್ರಥಮ ತರಗತಿಯಿಂದ ನಾಲ್ಕನೇ ತರಗತಿ, ಐದನೇ ತರಗತಿಯಿಂದ ಏಳನೇ ತರಗತಿ ಹಾಗೂ 8ನೇ ತರಗತಿಯಿಂದ 10ನೇ ತರಗತಿ ವರೆಗೆ ಮೂರು ವಿಭಾಗಗಳಲ್ಲಿ ನಡೆಯುತ್ತದೆ. ಅಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಕ್ರಿಸ್ಮಸ್ ಕ್ಯಾರಲ್ಸ್ ಕಾರ್ಯಕ್ರಮ ನಡೆಯಲಿದೆ. ಮಳಿಗೆಗಳಲ್ಲಿ ಎರಡು ದಿನ ಬೃಹದಾಕಾರದ ಕ್ರಿಸ್ಮಸ್ ಕೇಕ್, ಸಾOತಾ ಕ್ಲಾಸ್, ಕ್ರಿಸ್ಮಸ್ ಟ್ರೀ ವಿಶೇಷ ಆಕರ್ಷಣೆಯಾಗಲಿದೆ.
ಉಡುಪಿಯಲ್ಲಿ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಇಂತಹ ಮೆಗಾ ಉತ್ಸವ ಮೊದಲ ಬಾರಿಗೆ ನಡೆಯುತ್ತಿದ್ದು, ಸ್ಟೀವನ್ ಕುಲಾಸೊ ಮತ್ತು ಜೀವನ್ ಡಿಸೋಜಾ ಇವರ ನೇತೃತ್ವದಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ವಿವಿಧ ರೀತಿಯ ಆಹಾರ, ಆಟಿಕೆ ಸೇರಿದಂತೆ ವಿವಿಧ ಮಳಿಗೆಗಳನ್ನು ತೆರೆಯಲು ಅವಕಾಶವಿದ್ದು, 9901701381 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.





