ಮಣಿಪಾಲ: ನ.19-22ವರೆಗೆ ಮಾಹೆಯ 34ನೇ ಘಟಿಕೋತ್ಸವ- 7,694 ವಿದ್ಯಾರ್ಥಿಗಳಿಂದ ಪದವಿ ಸ್ವೀಕಾರ

ಮಣಿಪಾಲ, ನ.17: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ವಿಶ್ವವಿದ್ಯಾಲಯ ತನ್ನ 34ನೇ ಘಟಿಕೋತ್ಸವದ ಸಂಭ್ರಮಕ್ಕೆ ಸಿದ್ದತೆಯನ್ನು ನಡೆಸಿದ್ದು, ಈ ಬಾರಿ ಮಣಿಪಾಲ ಹಾಗೂ ಬೆಂಗಳೂರು ಕ್ಯಾಂಪಸ್‌‌ ಗಳಲ್ಲಿ ಒಟ್ಟು 10,277 ಮಂದಿ ವಿದ್ಯಾರ್ಥಿಗಳು ವಿವಿಧ ಪದವಿ, ಚಿನ್ನದ ಪದಕ, ಬಹುಮಾನ ಹಾಗೂ ಡಾಕ್ಟರೇಟ್ ಪದವಿಗಳ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ತಿಳಿಸಿದ್ದಾರೆ.

ಮಾಹೆಯ ಆಡಳಿತ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಘಟಿಕೋತ್ಸವದ ವಿವರಗಳನ್ನು ನೀಡಿದ ಡಾ. ಬಲ್ಲಾಳ್, ನ.19ರಿಂದ 22ರವರೆಗೆ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯುವ ಕ್ಯಾಂಪಸ್‌ನ ಘಟಿಕೋತ್ಸವದಲ್ಲಿ 7694 ವಿದ್ಯಾರ್ಥಿಗಳು ಪದವಿ ಪಡೆದರೆ, ನ.28 ಮತ್ತು 29ರಂದು ಬೆಂಗಳೂರು ಕ್ಯಾಂಪಸ್‌ನಲ್ಲಿ ನಡೆಯುವ ಘಟಿಕೋತ್ಸವದಲ್ಲಿ 2,583 ಮಂದಿ ವಿವಿಧ ಪದವಿಗಳನ್ನು ಸ್ವೀಕರಿಸಲಿದ್ದಾರೆ ಎಂದರು.

ಅಲ್ಲದೇ ವಿವಿಧ ವಿಷಯಗಳಲ್ಲಿ ಸಂಶೋಧನೆ ನಡೆಸಿರುವ 207 ಮಂದಿ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ (ಪಿಎಚ್‌ಡಿ) ಪದವಿಯನ್ನು ಸ್ವೀಕರಿಸಲಿದ್ದಾರೆ. ಇದರೊಂದಿಗೆ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನೂ ನೀಡಿ ಗೌರವಿಸಲಾಗುವುದು ಎಂದರು.

ಘಟಿಕೋತ್ಸವದ ಕುರಿತು ಮಾಹಿತಿಗಳನ್ನು ನೀಡಿದ ಮಾಹೆಯ ಕುಲಪತಿ ಡಾ.ಶರತ್ ಕೆ.ರಾವ್, ನಾಲ್ಕು ದಿನಗಳ ಘಟಿಕೋತ್ಸವವು ಅಪರಾಹ್ನ 2:30ಕ್ಕೆ ಕೆಎಂಸಿ ಗ್ರೀನ್ಸ್‌ನಲ್ಲಿ ಮೆರವಣಿಗೆಯೊಂದಿಗೆ ಪ್ರಾರಂಭಗೊಳ್ಳಲಿದೆ. ಮುಖ್ಯ ಅಥಿತಿಗಳಿಂದ ಘಟಿಕೋತ್ಸವ ಭಾಷಣ, ಪದವಿ ಪ್ರದಾನದ ಬಳಿಕ ವಿವಿಯ ಪ್ರಮುಖರಿಂದ ಅಭಿನಂದನಾ ಸಂದೇಶ ಇರಲಿದೆ ಎಂದರು.

ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸುವ ಒಟ್ಟು 10,277 ಮಂದಿ ವಿದ್ಯಾರ್ಥಿಗಳಲ್ಲಿ 7851 ಮಂದಿ ಖುದ್ದು ಹಾಜರಿದ್ದು ಪದವಿ ಸ್ವೀಕರಿಸಿದರೆ, 2426 ಮಂದಿ ಗೈರುಹಾಜರಿದ್ದು, ಅಂಚೆ ಮೂಲಕ ಪದವಿಯನ್ನು ಸ್ವೀಕರಿಸಲಿದ್ದಾರೆ ಎಂದರು.

ಮೊದಲ ದಿನವಾದ ನ.19ರಂದು ಮಣಿಪಾಲ ಎಂಐಟಿಯ ಹಳೆ ವಿದ್ಯಾರ್ಥಿಯಾಗಿದ್ದು, ಈಗ ಕೋನೆ ಎಲಿವೇಟರ್ಸ್ ಇಂಡಿಯಾ ಹಾಗೂ ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಅಮಿತ್ ಗೋಸೈನ್ ಅವರು ಮುಖ್ಯ ಅತಿಥಿಯಾಗಿ ಬಾಗವಹಿಸಲಿದ್ದು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ದಿನದಲ್ಲಿ 1401 ಮಂದಿ ಪದವಿ ಸ್ವೀಕರಿಸಲಿದ್ದಾರೆ ಎಂದರು.

ನ.20ರ ಎರಡನೇ ದಿನದಂದು 1460 ಮಂದಿ ಪದವಿ ಪಡೆದರೆ, ಹಿಟಾಚಿ ಸಿಸ್ಟಮ್ಸ್ ಇಂಡಿಯಾದ ನಿರ್ದೇಶಕ ಹಾಗೂ ಸಿಟಿಆರ್‌ಓ ಕೊಜಿ ತ್ಸುಬೋಟಾ ಮುಖ್ಯ ಅತಿಥಿಯಾಗಿರುವರು. ನ.21ರಂದು ಬ್ರಿಟನ್‌ನ ಲ್ಯಾಂಕಾಸ್ಟರ್ ವಿವಿಯ ಪ್ರೊವೈಸ್ ಚಾನ್ಸಲರ್ ಹಾಗೂ ಸಂಶೋಧನೆ ಮತ್ತು ಔದ್ಯಮಿಕ ವಿಭಾಗದ ಪ್ರೊ.ಜೋ ರೈಕ್ರಾಫ್ಟ್ ಮಲೋನ್ ಮುಖ್ಯ ಅತಿಥಿಯಾಗಿರುವರು.

ಕೊನೆಯ ದಿನವಾದ ನ.22ರಂದು ಕೆನಡ ಯುಎನ್‌ಬಿ ವಿವಿಯ ಅಧ್ಯಕ್ಷ ಹಾಗೂ ಕುಲಪತಿಗಳಾದ ಡಾ.ಕ್ಯಾಥಿ ವಿಲ್ಸನ್ ಮುಖ್ಯಅತಿಥಿಯಾಗಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಮಾಹೆಯು ಕೆನಡಾದ ಯುಎನ್‌ಬಿ ವಿವಿಯೊಂದಿಗೆ ಡ್ಯುಯೆಲ್ ಡಿಗ್ರಿ ಪ್ರೋಗ್ರಾಮ್ ಪ್ರಾರಂಭಿಸಿದ್ದು, ಇದರಲ್ಲಿ 25 ಮಂದಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಅಂದು ಪದವಿ ಪ್ರದಾನ ನಡೆಯಲಿದೆ. ಮೊದಲ ಬಾರಿ ಆನ್‌ಲೈನ್‌ನಲ್ಲಿ ಪದವಿ ಪಡೆದವರು ಸಹ ಇಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ.ಶರತ್ ರಾವ್ ತಿಳಿಸಿದರು.

ಮಾಹೆ ಈಗಾಗಲೇ ತನ್ನ ದುಬಾಯಿ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಘಟಿಕೋತ್ಸವನ್ನು ನಡೆಸಿದೆ. ಮಣಿಪಾಲ ಕ್ಯಾಂಪಸ್ ಬಳಿಕ ಬೆಂಗಳೂರು ಕ್ಯಾಂಪಸ್‌ನಲ್ಲಿ ನ.28 ಮತ್ತು 29ರಂದು ಘಟಿಕೋತ್ಸವ ನಡೆಯಲಿದೆ. ಮುಂದಿನ ಎಪ್ರಿಲ್‌ನಲ್ಲಿ ಜೆಮ್‌ಷೆದ್‌ಪುರ ಕ್ಯಾಂಪಸ್‌ನಲ್ಲಿ ಹಾಗೂ ಮೇ ತಿಂಗಳಲ್ಲಿ ಮಂಗಳೂರು ಕ್ಯಾಂಪಸ್‌ನಲ್ಲಿ ಘಟಿಕೋತ್ಸವನ್ನು ಆಯೋಜಿಸ ಲಾಗುತ್ತದೆ ಎಂದು ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹೆಯ ರಿಜಿಸ್ಟ್ರಾರ್ ಡಾ.ಪಿ.ಗಿರಿಧರ್ ಕಿಣಿ, ಮಾಹೆಯ ಸಿಓಓ ಡಾ.ಆನಂದ ವೇಣುಗೋಪಾಲ್, ಮೇ.ಜ.ಡಾ. ಮ್ಯಾಥ್ಯೂ ಜೇಕಬ್, ಡಾ.ಸಂದೀಪ್ ಶೆಣೈ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!