ಬಡಗಬೆಟ್ಟು ಸೊಸೈಟಿಯಲ್ಲಿ 73ನೇ ಸಹಕಾರ ಸಪ್ತಾಹದ ಉದ್ಘಾಟನೆಯ ಅಂಗವಾಗಿ ಧ್ವಜಾರೋಹಣ
ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಸಂಘದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಧ್ವಜಾರೋಹಣ ನೆರವೇರಿಸಿದರು.

ಈ ವರ್ಷದ ಸಹಕಾರ ಸಪ್ತಾಹದ ಧ್ಯೇಯವಾಕ್ಯವಾದ “ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ ಹಾಗೂ ವೃತ್ತಿಪರ ಸೇವೆ” ಎಂಬ ವಿಷಯದ ಕುರಿತು ಮಾತನಾಡಿದ ಅವರು, ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ನಾವು ಕಾರ್ಯವೈಖರಿಯಲ್ಲಿ ನಿರಂತರ ಸುಧಾರಣೆ ಮಾಡಿಕೊಳ್ಳಬೇಕು. ಪರಿಸರ ಸ್ನೇಹಿ ಚಿಂತನೆ, ಆಧುನಿಕ ತಂತ್ರಜ್ಞಾನದ ಅಳವಡಿಕೆ, ಸಿಬ್ಬಂದಿಯ ಕೌಶಲ್ಯಾಭಿವೃದ್ಧಿ ಹಾಗೂ ವೃತ್ತಿಪರ ಸೇವೆಗಳ ಮೂಲಕ ಬೆಳವಣಿಗೆ ಹೊಂದಬೇಕು. ಕಾಲಕ್ಕೆ ತಕ್ಕಂತೆ ನಾವು ಕೂಡ ಅಪ್ಡೇಟ್ ಆಗುವುದರೊಂದಿಗೆ ಗ್ರಾಹಕರ ನಿರೀಕ್ಷೆಗಳಿಗೆ ಸ್ಪಂದಿಸುವುದು ಅತ್ಯಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಪುರುಷೋತ್ತಮ ಪಿ. ಶೆಟ್ಟಿ, ನಿರ್ದೇಶಕರಾದ ಉಮಾನಾಥ ಎಲ್., ಪದ್ಮನಾಭ ನಾಯಕ್, ಸೈಯ್ಯದ್ ಅಬ್ದುಲ್ ರಜಾಕ್, ಸಾಧು ಸಾಲ್ಯಾನ್, ವಿನಯ ಕುಮಾರ್ ಟಿ.ಎ., ಜಯಾ ಶೆಟ್ಟಿ, ಗಾಯತ್ರಿ ಭಟ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಂಘದ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್ ಸ್ವಾಗತಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ವಂದಿಸಿದರು. ಮಲ್ಪೆ ಶಾಖಾ ವ್ಯವಸ್ಥಾಪಕರಾದ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು.





