ಉದ್ಯಾವರ ಮೀನುಗಾರಿಕಾ ಮೀನು ಉತ್ಪನ್ನ ಸಾಮಗ್ರಿಗಳ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ವಿ. ಸುವರ್ಣ ‘ಸಹಕಾರ ರತ್ನ ಪ್ರಶಸ್ತಿ- 2026’ ಪ್ರಶಸ್ತಿ

ಉಡುಪಿ: ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ನೀಡುವ ಪ್ರತಿಷ್ಠಿತ ‘ಸಹಕಾರ ರತ್ನ ಪ್ರಶಸ್ತಿ- 2026’ ಈ ಬಾರಿ ಉಡುಪಿ ಜಿಲ್ಲೆಯ ಉದ್ಯಾವರ ಪಿತ್ರೋಡಿ ಮೀನುಗಾರಿಕಾ ಮೀನು ಉತ್ಪನ್ನ ಸಾಮಗ್ರಿಗಳ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ವಿ. ಸುವರ್ಣ ಅವರಿಗೆ 73ನೇ ಸಹಕಾರ ಸಪ್ತಾಹ-2026 ಸಮಾರಂಭದಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಪ್ರಶಸ್ತಿಯನ್ನು ಶನಿವಾರ ವಿತರಿಸಿದರು.

ಹಲವು ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗಿರೀಶ್ ವಿ. ಸುವರ್ಣ ಅವರು, ಸಹಕಾರಿ ಸಂಸ್ಥೆಯನ್ನು ಮೀನುಗಾರರ ಶ್ರೇಯೋಭಿವೃದ್ದಿಗೆ ಬಳಸಿ ಉತ್ತಮ ಸೇವೆಗಳನ್ನು ನೀಡಿರುತ್ತಾರೆ.

ಪ್ರತಿ ವರ್ಷ ಸರಕಾರ ಮೀನುಗಾರರಿಗೆ ನೀಡುವ ವಿವಿಧ ಜನಪರ ಮತ್ತು ಉಪಯುಕ್ತ ಕಾರ್ಯಕ್ರಮ ತಮ್ಮ ಸಮುದಾಯದ ಹಾಗೂ ಮೀನುಗಾರರಿಗೆ ತಲುಪಿಸಿದ್ದಾರೆ. ಸಹಕಾರ ಕ್ಷೇತ್ರದ ಮೂಲಕ ಸಮಾಜಮುಖಿ ಚಟುವಟಿಕೆಗಳಿಗೆ ಆದ್ಯತೆ ನೀಡಿರುವ ಅವರ ಕಾರ್ಯನಿರ್ವಹಣೆಗೆ ಈಗಾಗಲೇ ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಇದೀಗ ರಾಜ್ಯ ಸರಕಾರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಒಲಿದಿರುವುದು ಅವರ ಈ ಸುದೀರ್ಘ ಸೇವೆಗೆ ಸಂದ ಮತ್ತೊಂದು ಮಹತ್ವದ ಗೌರವವಾಗಿದೆ.

ಗಿರೀಶ್ ವಿ ಸುವರ್ಣ ರವರು ಉದ್ಯಾವರ ಗ್ರಾಮ ಪಂಚಾಯತ್‌ನಲ್ಲಿ ಎರಡು ಬಾರಿ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಸಮಾರಂಭದಲ್ಲಿ ರಾಜ್ಯ ಸಹಕಾರ ಸಚಿವ ಲಕ್ಷ್ಮಣ ಸಂಗಪ್ಪ ಸವದಿ,‌ ಕರ್ನಾಟಕ ಸಹಕಾರ ಮಹಾಮಂಡಳ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ, ಕರ್ನಾಟಕ ಸಹಕಾರ ವಸತಿ ಮಹಾಮಂಡಳ ಅಧ್ಯಕ್ಷ, ಶಾಸಕ ಎಸ್.ಟಿ. ಸೋಮಶೇಖರ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಎಂಎಲ್ಸಿ ಎಸ್ ರವಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!