ಹೆಜಮಾಡಿ: ಗೋವಾದಿಂದ ಅಕ್ರಮ ಮದ್ಯ ಸಾಗಾಟ- ನಾಲ್ವರ ಬಂಧನ- ₹22.35 ಲಕ್ಷ ಮೌಲ್ಯದ ಸೊತ್ತು ವಶ
ಉಡುಪಿ: ಗೋವಾ ರಾಜ್ಯದಿಂದ ಯಾವುದೇ ಪರವಾನಿಗೆ ಇಲ್ಲದೆ ಮಂಗಳೂರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಜಾಲವನ್ನು ಪಡುಬಿದ್ರೆ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ 2,583 ಲೀಟರ್ ಮದ್ಯ ಹಾಗೂ ಸಾಗಾಟಕ್ಕೆ ಬಳಸಿದ್ದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ನ.11ರಂದು ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ ಜಿ. ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಕಾಪು ತಾಲೂಕು ಹೆಜಮಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಈ ವೇಳೆ ಗೋವಾದಿಂದ ಮಂಗಳೂರಿಗೆ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದ ಮಹೀಂದ್ರಾ ಪಿಕ್‌ಅಪ್ ಇನ್ಸುಲೇಟರ್ ವಾಹನ ಹಾಗೂ ಅದಕ್ಕೆ ಎಸ್ಕಾರ್ಟ್ ನೀಡುತ್ತಿದ್ದ ಮಾರುತಿ ಸ್ವಿಫ್ಟ್ ಕಾರನ್ನು ತಡೆದು ಪರಿಶೀಲಿಸಲಾಯಿತು. ಯಾವುದೇ ಪರವಾನಿಗೆ ಇಲ್ಲದೆ ಮದ್ಯ ಸಾಗಾಟ ಮಾಡುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ವಾಹನಗಳಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆಯಲಾಯಿತು.
ಬಂಧಿತರನ್ನು ಕಾರವಾರದ ಕಿನ್ನಾರ ಗ್ರಾಮದ ವಿನಯ್ (47), ನಂದಗಡದ ಗಜಾನನ ಮಹಾಬಲೇಶ್ವರ ನಾಯ್ಕ್ (45), ಅಮದಹಳ್ಳಿಯ ಸುಜಿತ್ ತಾಳೆಕೆರೆ (25) ಹಾಗೂ ಶಿರ್ವಾಡ ಗ್ರಾಮದ ಲಾರೆನ್ಸ್ ಥಾಮಸ್ ಮೆಂಡೋನ್ಸ್ (49) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳ ಪೈಕಿ ವಿನಯ್ ವಿರುದ್ಧ ಈಗಾಗಲೇ ಕಾರವಾರ ಜಿಲ್ಲೆಯ ಚಿತ್ತಾಕುಲ ಪೊಲೀಸ್ ಠಾಣೆ, ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಅಬಕಾರಿ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
₹22.35 ಲಕ್ಷ ಮೌಲ್ಯದ ಸೊತ್ತು ವಶ
ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ವಿವರ ಹೀಗಿದೆ:
2,583 ಲೀಟರ್ ಮದ್ಯದ ಬಾಕ್ಸ್‌ಗಳು – ಅಂದಾಜು ₹14,35,000.
ಮಹೀಂದ್ರಾ ಪಿಕ್‌ಅಪ್ ಇನ್ಸುಲೇಟರ್ ವಾಹನ – ಅಂದಾಜು ₹5,00,000.
ಮಾರುತಿ ಸ್ವಿಫ್ಟ್ ಕಾರು – ಅಂದಾಜು ₹3,00,000.
ಒಟ್ಟು ₹22,35,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2026ರಂತೆ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 32, 34, 38A ಹಾಗೂ ಬಿಎನ್‌ಎಸ್ ಕಲಂ 336(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ
ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಜಿ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಪಡುಬಿದ್ರೆ ಠಾಣೆಯ ಪಿಎಸ್‌ಐಗಳಾದ ಶಕ್ತಿವೇಲು ಈ., ಅನಿಲ್ ಕುಮಾರ್ ಟಿ. ನಾಯ್ಕ್, ಎಎಸ್‌ಐಗಳಾದ ರಾಜೇಶ್, ಗಿರೀಶ್, ಹೆಡ್‌ಕಾನ್‌ಸ್ಟೇಬಲ್‌ಗಳಾದ ಕೃಷ್ಣಪ್ರಸಾದ್, ಜೀವನ್, ಸತೀಶ್ ಬೆಳ್ಳೆ, ಶಿವಾನಂದ ಪೂಜಾರಿ, ಅಶ್ವಿನ್ ಕುಮಾರ್, ಕಾನ್‌ಸ್ಟೇಬಲ್‌ಗಳಾದ ಶರಣ್, ಯಾಸಿನ್ ಖಾಜಿ, ರೆಹಮಾನ್, ರುಕ್ಮಿಣಿ ಹಾಗೂ ಸಿಡಿಆರ್ ವಿಭಾಗದ ದಿನೇಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





