ನ.5: ಉಡುಪಿ ಜಿಲ್ಲೆಯ ಕೃಷಿಕರ ಸಮಸ್ಯೆಗಳ ಕುರಿತಂತೆ ವಿಚಾರ ಸಂಕಿರಣ
ಉಡುಪಿ, ನ.3: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾ ಕೃಷಿಕ ಸಮಾಜ ಹಾಗೂ ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ಕರಾವಳಿಯಲ್ಲಿ ರೈತರ ಭೂಮಿಗೆ ಸಂಬಂಧಿ ಸಿದ ಶಾಸನಬದ್ಧ ಹಕ್ಕುಗಳಾದ ಕುಮ್ಕಿ ಹಕ್ಕು, ಗೇರು ಲೀಸ್ ಭೂಮಿ, ಕಸ್ತೂರಿ ರಂಗನ್ ವರದಿ ಮತ್ತು ಕಾಡುಪ್ರಾಣಿ ಹಾವಳಿ ಸಮಸ್ಯೆಗಳ ಕುರಿತು ನವೆಂಬರ್ 5ರಂದು ಉಡುಪಿಯಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಅಶೋಕ್‌ಕುಮಾರ್ ಕೊಡ್ಗಿ ಹೇಳಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ.5ರ ಗುರುವಾರ ಬೆಳಗ್ಗೆ 10:30ಕ್ಕೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳ ಸಂಸದರು ಹಾಗೂ ಶಾಸಕರು ಇದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಒಂದು ದಿನದ ಈ ವಿಚಾರಸಂಕಿರಣದಲ್ಲಿ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ರೈತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಹಾಗೂ ಹಕ್ಕುಗಳ ಕುರಿತು ಚರ್ಚಿಸಿ ಸರಕಾರದ ಗಮನ ಸೆಳೆಯಬೇಕು ಎಂದು ವಿನಂತಿಸಿದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹಾಗೂ ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಲಿ ಭಾಗವಹಿಸಲಿ ದ್ದಾರೆ ಎಂದರು.
ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿ ಸಿರುವ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳಿಂದ ಕರಾವಳಿ ಭಾಗದ ಕೃಷಿಕರು ಹಾಗೂ ಸ್ಥಳೀಯ ಜನ ಜೀವನದ ಮೇಲೆ ಪರಿಣಾಮ ಬೀರಿದೆ, ಪಶ್ಚಿಮ ಘಟ್ಟ ಪ್ರದೇಶದ ಭೌತಿಕ ಪರಿಶೀಲನೆ ನಡೆಸದೆ, ಕೃಷಿ ಭೂಮಿ ಗಳನ್ನೂ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರಿಸಿರುವುದರಿಂದ ರೈತರು ತಲೆತಲಾಂತರಗಳಿಂದ ಅನುಭವಿಸಿ ಕೊಂಡು ಬಂದಿರುವ ಭೂಮಿಯ ಹಕ್ಕುಗಳಿಗೆ ಧಕ್ಕೆಯಾಗುವ ಆತಂಕವಿದೆ. ಆದ್ದರಿಂದ ಖಾಸಗಿ ಕೃಷಿ ಭೂಮಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ಹೊರಗಿಡಬೇಕು ಹಾಗೂ ಹಿಂದಿನ ಅಧಿಸೂಚನೆಗಳ ಮರುಪರಿಶೀಲಿಸಿ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ಪ್ರದೀಪ್ ಹೆಬ್ಬಾರ್ ನಂಚಾರ್ ಒತ್ತಾಯಿಸಿದರು.
ಕುಮ್ಕಿ ಭೂಮಿಯ ಖಾತೆ ಮಾಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಸ್ವಾತಂತ್ರ್ಯಪೂರ್ವದಿಂದಲೇ ಕೃಷಿ ಭೂಮಿ ಉಳ್ಳವರು ಅದಕ್ಕೆ ತಾಗಿಕೊಂಡಿರುವ ಸರಕಾರಿ ಭೂಮಿಗಳಲ್ಲಿ ತಮ್ಮ ಖಾಸಗಿ ಭೂ ಗಡಿಯಿಂದ 100 ಗಜದವರೆಗಿನ ಭೂಮಿಯಲ್ಲಿ ಕೃಷಿಗೆ ಅನುಕೂಲವಾಗುವಂತೆ ಸೊಪ್ಪು ದರಲೆ ಪಡೆಯಲು ಕುಮ್ಕಿ ಭೂಮಿ ಪಡೆದಿದ್ದು, ಅದನ್ನು ಈಗ ಆಯಾ ಕೃಷಿಕರಿಗೆ ಖಾತಾ ಮಾಡಿ ನೀಡುವಂತೆ ಕೇಳಿಕೊಳ್ಳುತಿದ್ದೇವೆ ಎಂದರು.
ಅದೇ ರೀತಿ 1958-59ನೇ ಅವಧಿಯಲ್ಲಿ ಗೇರು ಕೃಷಿಗೆ ಉತ್ತೇಜನ ನೀಡಲು ಸರಕಾರಿ ಬಂಜರು ಭೂಮಿಯನ್ನು 30 ವರ್ಷಗಳ ಅವಧಿಗೆ ಗೇರು ಕೃಷಿ ಮಾಡಲು ಲೀಸ್‌ಗೆ ನೀಡಿದ್ದು, ಅದೀಗ ಅವಧಿ ಮುಗಿದಿದ್ದು ಆ ಭೂಮಿಯ ಮಾಲಕ ತ್ವವನ್ನು ಆಯಾ ರೈತರಿಗೆ ಮಾರುಕಟ್ಟೆ ದರಕ್ಕೆ ನೀಡುವಂತೆ ಒತ್ತಾಯಿಸುತ್ತಿದ್ದವೆ ಎಂದು ಹೆಬ್ಬಾರ್ ತಿಳಿಸಿದರು.
ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಂಘದ ಉಪಾಧ್ಯಕ್ಷ, ಕೃಷಿಕ ವಿಠಲ್ ಶೆಟ್ಟಿ ಶೇಡಿಕೊಡ್ಲು ಮಾತನಾಡಿ, ಕರಾವಳಿಯಲ್ಲಿ ಕಾಡು ಪ್ರಾಣಿಗಳ ಉಪಟಳದಿಂದ ಕೃಷಿಗೆ ನಿರಂತರವಾಗಿ ಹಾನಿಯಾಗುತ್ತಿದೆ, ಹೀಗಾಗಿ ಕೃಷಿಕರು ಕೃಷಿ ಮಾಡುವುದನ್ನೇ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಕ ಬೆಳೆದ ಬೆಳೆಗಳೆಲ್ಲಾ ಕಾಡುಹಂದಿ, ಜಿಂಕೆ, ನವಿಲು, ಮಂಗಲ ಕಾಡುಕೋಣಗಳ ಪಾಲಾಗುತ್ತಿದ್ದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ . ಕಾಡುಪ್ರಾಣಿಗಳ ಉಪಟಳದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕೃಷಿ ಸಂಘಟನೆಗಳ ಪ್ರಮುಖರಾದ ಡಾ. ಅತುಲ್ ಕುಮಾರ್ ಶೆಟ್ಟಿ ಚಿತ್ತೂರು, ಉಪೇಂದ್ರ ನಾಯಕ್, ವೈಕುಂಠ ಹೇರ್ಳೆ ಉಪಸ್ಥಿತರಿದ್ದರು.





