ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ: ಕೃಷ್ಣಮೂರ್ತಿ ಆಚಾರ್ಯರಿಗೆ ಈ ಬಾರಿಯಾದರೂ ಒಲಿಯಲಿದೆಯೇ ಅವಕಾಶ?

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆ ಇದೀಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿರುವ ಕೃಷ್ಣಮೂರ್ತಿ ಆಚಾರ್ಯ ಅವರಿಗೆ ಕಾಂಗ್ರೆಸ್ ಪಕ್ಷ ಅವಕಾಶ ನೀಡಲಿದೆಯೇ ಎಂಬ ಚರ್ಚೆ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಂಕಷ್ಟದ ಸಂದರ್ಭಗಳಲ್ಲಿ ಯುವ ಕಾರ್ಯಕರ್ತರ ಬೆನ್ನಿಗೆ ನಿಲ್ಲುವ ನಾಯಕ ಎಂಬ ಗುರುತಿಸಿಕೊಂಡಿರುವ ಕೃಷ್ಣಮೂರ್ತಿ ಆಚಾರ್ಯ ಅವರಿಗೆ ಈ ಬಾರಿಯಾದರೂ ಜವಾಬ್ದಾರಿ ವಹಿಸಬೇಕೆಂಬ ಅಭಿಪ್ರಾಯ ಅವರ ಬೆಂಬಲಿಗರಿಂದ ವ್ಯಕ್ತವಾಗುತ್ತಿದೆ.

ಈ ಹಿಂದೆಯೂ ವಿವಿಧ ಪಕ್ಷದ ಹುದ್ದೆಗಳಿಗೆ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ್ದರೂ ಅವಕಾಶ ಕೈತಪ್ಪಿತ್ತು. ಪ್ರತಿ ಬಾರಿಯೂ ಅವರಿಗೆ ಹುದ್ದೆ ದೊರೆಯದಂತೆ ಮಾಡುವಲ್ಲಿ ಯಾವುದಾದರೂ ಕಾಣದ ಕೈಗಳು ಕೆಲಸ ಮಾಡುತ್ತಿವೆಯೇ ಎಂಬ ಪ್ರಶ್ನೆಯೂ ಅವರ ಬೆಂಬಲಿಗರ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದರೆ ಈ ಹಿಂದಿನ ನಿರಾಸೆಗಳ ಬಗ್ಗೆ ಬೇಸರವಿದ್ದರೂ ಯಾರ ಮೇಲೂ ವೈಯಕ್ತಿಕವಾಗಿ ಕೋಪವಿಲ್ಲ ಎಂಬುದು ಕೃಷ್ಣಮೂರ್ತಿ ಆಚಾರ್ಯ ಅವರ ನಿಲುವು.

ಅಮೃತಾ ಕೃಷ್ಣಮೂರ್ತಿ ಗೆಲುವಿನ ಹಿಂದಿನ ಸಂಘಟನಾ ಶಕ್ತಿ!

ಉಡುಪಿ ನಗರಸಭೆಗೆ ನಿರಂತರವಾಗಿ ಆಯ್ಕೆಯಾಗುತ್ತಿರುವ ಅಮೃತಾ ಕೃಷ್ಣಮೂರ್ತಿ ಅವರ ರಾಜಕೀಯ ಯಶಸ್ಸಿನ ಹಿಂದೆ ಕೃಷ್ಣಮೂರ್ತಿ ಆಚಾರ್ಯ ಅವರ ಸಂಘಟನಾ ಶಕ್ತಿ,ಜನಸಂಪರ್ಕ ಮತ್ತು ಕಾರ್ಯಕರ್ತರೊಂದಿಗಿನ ಒಡನಾಟ ಪ್ರಮುಖ ಪಾತ್ರ ವಹಿಸಿದೆ ಎಂಬ ಅಭಿಪ್ರಾಯವೂ ಸ್ಥಳೀಯ ರಾಜಕೀಯ ವಲಯದಲ್ಲಿದೆ. ಜನರೊಂದಿಗೆ ನೇರ ಸಂಪರ್ಕ ಹೊಂದಿರುವ, ಕಾರ್ಯಕರ್ತರ ವಿಶ್ವಾಸ ಗಳಿಸಿರುವ ಇಂತಹ ನಾಯಕತ್ವಕ್ಕೆ ಪಕ್ಷ ಸೂಕ್ತ ಸ್ಥಾನಮಾನ ನೀಡಬೇಕಲ್ಲವೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.

ಕೃಷ್ಣಮೂರ್ತಿ ಆಚಾರ್ಯ ಅವರು ಯಾರದ್ದೋ ಅಡಿಯಾಳಾಗಿ ರಾಜಕಾರಣ ಮಾಡುವವರಲ್ಲ, ಸ್ವಂತ ನಿಲುವು ಹಾಗೂ ಜನಬೆಂಬಲ ಹೊಂದಿರುವ ನಾಯಕ ಎಂಬುದು ಅವರ ಬೆಂಬಲಿಗರ ವಾದ. ಪಕ್ಷಕ್ಕೆ ಇಂತಹ ಗಟ್ಟಿಯಾದ ಧ್ವನಿ ಮತ್ತು ಸ್ಪಷ್ಟ ನಿಲುವಿನ ನಾಯಕರು ಅಗತ್ಯವಿಲ್ಲವೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.

ಅವಕಾಶ ಸಿಕ್ಕರೆ ಸಂಘಟನೆಗೆ ಮೊದಲ ಆದ್ಯತೆ

ಈ ಕುರಿತು ಮಾತನಾಡಿರುವ ಕೃಷ್ಣಮೂರ್ತಿ ಆಚಾರ್ಯ ಅವರು, ಈ ಬಾರಿ ಪಕ್ಷ ಅವಕಾಶ ನೀಡಲಿದೆ ಎಂಬ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಅವಕಾಶ ಸಿಕ್ಕರೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪಕ್ಷದ ಗೆಲುವೇ ನನ್ನಮೊದಲ ಆದ್ಯತೆ. ಬೂತ್‌ಮಟ್ಟದ ಕಾರ್ಯಕರ್ತರಿಗೆ ಆದ್ಯತೆ ನೀಡಿ, ಅವರಿಗೆ ಸೂಕ್ತ ಗೌರವ ಮತ್ತು ಮನ್ನಣೆ ದೊರೆಯುವಂತೆ ಮಾಡುವುದು ನನ್ನ ಕಾರ್ಯಸೂಚಿ.

ನಗರಸಭೆ ಮಾತ್ರವಲ್ಲದೆ ಉಡುಪಿ ಬ್ಲಾಕ್ ವ್ಯಾಪ್ತಿಯ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವಂತೆ ಸಂಘಟನಾತ್ಮಕವಾಗಿ ಶ್ರಮಿಸುತ್ತೇನೆ. ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುವುದು ನನ್ನ ಗುರಿ. ಎಲ್ಲ ಅಭ್ಯರ್ಥಿಗಳು ಗೆದ್ದಾಗ ಮಾತ್ರ ನನ್ನ ಪರಿಶ್ರಮ ಸಾರ್ಥಕವಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಿರಾಸೆಯಿದ್ದರೂ ಪಕ್ಷದ ಮೇಲಿನ ವಿಶ್ವಾಸ ಕುಂದಿಲ್ಲ

ಹಿಂದೆ ವಿವಿಧ ಹುದ್ದೆಗಳಿಗೆ ತಮ್ಮ ಉಮೇದುವಾರಿಕೆಯನ್ನು ವ್ಯಕ್ತಪಡಿಸಿದ್ದರೂ ಅವಕಾಶ ದೊರೆಯದಿದ್ದಾಗ ಸಹಜವಾಗಿಯೇ ಬೇಸರವಾಗಿದೆ. ಆದರೆ ಯಾರ ಮೇಲೂ ವೈಯಕ್ತಿಕ ಕೋಪ ಅಥವಾ ಅಸಮಾಧಾನವಿಲ್ಲ. ಈ ಬಾರಿ ಪಕ್ಷ ಅವಕಾಶ ನೀಡಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಕೃಷ್ಣಮೂರ್ತಿ ಆಚಾರ್ಯ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಈಗ ಪಕ್ಷದ ವರಿಷ್ಠರ ನಿರ್ಧಾರದತ್ತ ಚಿತ್ತ

ಒಂದು ಕಡೆ ಪಕ್ಷದ ಸಂಘಟನೆಯಲ್ಲಿ ದುಡಿಯುವ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕೆಂಬ ಕೂಗು, ಮತ್ತೊಂದೆಡೆ ಯುವಕರೊಂದಿಗೆ ನಿಲ್ಲುವ ಹಾಗೂ ಜನಸಂಪರ್ಕ ಹೊಂದಿರುವ ನಾಯಕತ್ವದ ಅಗತ್ಯತೆ. ಈ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ಆಚಾರ್ಯ ಅವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಹುದ್ದೆಗಾಗಿ ಕಾಯುತ್ತಿರುವ ನಾಯಕರ ಪಟ್ಟಿಯಲ್ಲಿ ಮತ್ತೊಂದು ಹೆಸರನ್ನು ಸೇರಿಸುವುದಕ್ಕಿಂತ, ಸಂಘಟನಾ ಸಾಮರ್ಥ್ಯ ಮತ್ತು ಜನಬೆಂಬಲ ಹೊಂದಿರುವ ನಾಯಕನಿಗೆ ಜವಾಬ್ದಾರಿ ನೀಡುವ ಮೂಲಕ ಪಕ್ಷ ಹೊಸ ಸಂದೇಶ ನೀಡಲಿದೆಯೇ? ಹಿಂದಿನ ಅವಕಾಶ ವಂಚನೆಯ ಚರ್ಚೆಗಳಿಗೆ ಈ ಬಾರಿ ತೆರೆ ಬೀಳಲಿದೆಯೇ? ಎಂಬ ಪ್ರಶ್ನೆಗಳಿಗೆ ಕಾಂಗ್ರೆಸ್ ವರಿಷ್ಠರ ನಿರ್ಧಾರವೇ ಉತ್ತರ ನೀಡಬೇಕಿದೆ.

ಹಿರಿಯ ನಾಯಕರ ಗರಡಿಯಲ್ಲಿ ರೂಪುಗೊಂಡ ಯುವ ನಾಯಕ

ಕೃಷ್ಣಮೂರ್ತಿ ಆಚಾರ್ಯ ಅವರು ರಾಜಕೀಯವಾಗಿ ಆರಂಭದಿಂದಲೇ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಬೆಳೆದು ಬಂದವರು. ಕಾಂಗ್ರೆಸ್‌ನ ಹಿರಿಯ ನಾಯಕ ದಿವಂಗತ ಆಸ್ಕರ್ ಫರ್ನಾಂಡೀಸ್ ಹಾಗೂ ಉಡುಪಿಯ ಮಾಜಿ ಶಾಸಕ ದಿವಂಗತ ಯು.ಆರ್. ಸಭಾಪತಿ ಅವರ ಗರಡಿಯಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತು, ಸಂಘಟನೆ ಮತ್ತು ಜನಸಂಪರ್ಕದ ಅನುಭವ ಪಡೆದುಕೊಂಡವರು. ಹಿರಿಯ ನಾಯಕರ ಒಡನಾಟದಲ್ಲಿ ರಾಜಕೀಯದ ಮೌಲ್ಯಗಳು, ಕಾರ್ಯಕರ್ತರೊಂದಿಗೆ ಬೆರೆಯುವ ಗುಣ ಹಾಗೂ ಪಕ್ಷದ ಸಂಘಟನೆಯನ್ನು ಬಲಪಡಿಸುವ ಮಹತ್ವವನ್ನು ಅರಿತುಕೊಂಡವರು.

ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದ ಅನುಭವವನ್ನು ಇಂದಿನ ಯುವ ಕಾರ್ಯಕರ್ತರೊಂದಿಗೆ ಹಂಚಿಕೊಳ್ಳುತ್ತಾ, ಕಷ್ಟದ ಸಂದರ್ಭಗಳಲ್ಲಿ ಅವರ ಬೆಂಬಲಕ್ಕೆ ನಿಲ್ಲುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಹಿರಿಯರ ಅನುಭವ ಮತ್ತು ಯುವಕರ ಉತ್ಸಾಹವನ್ನು ಒಟ್ಟುಗೂಡಿಸಿ ಪಕ್ಷ ಸಂಘಟಿಸುವ ಆಶಯ ಅವರಲ್ಲಿದೆ. ಈ ರಾಜಕೀಯ ಅನುಭವ ಮತ್ತು ಸಂಘಟನಾ ಹಿನ್ನೆಲೆಯೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅವರ ಆಕಾಂಕ್ಷೆಗೆ ಪ್ರಮುಖ ಆಧಾರವಾಗಿದೆ.

ಸಂಕಷ್ಟದ ಸಂದರ್ಭದಲ್ಲೂ ಕಾರ್ಯಕರ್ತರ ಕೈಬಿಡದ ನಾಯಕ

ಯಾವುದೇ ಸಂದಿಗ್ಧ ಪರಿಸ್ಥಿತಿ ಎದುರಾದರೂ ತನ್ನನ್ನು ನಂಬಿ ಬಂದ ಕಾರ್ಯಕರ್ತರನ್ನು ಎಂದಿಗೂ ಕೈಬಿಡದೆ ಅವರ ಬೆನ್ನಿಗೆ ನಿಲ್ಲುವ ಗುಣ ಕೃಷ್ಣಮೂರ್ತಿ ಆಚಾರ್ಯ ಅವರ ರಾಜಕೀಯ ವ್ಯಕ್ತಿತ್ವದ ಪ್ರಮುಖ ಅಂಶವಾಗಿದೆ. ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸುವುದು, ಅವರ ಸಮಸ್ಯೆಗಳಿಗೆ ಧ್ವನಿಯಾಗುವುದು ಹಾಗೂ ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬುವುದು ಅವರ ಕಾರ್ಯಶೈಲಿಯಾಗಿದೆ. ಹುದ್ದೆ ಮತ್ತು ಅಧಿಕಾರಕ್ಕಿಂತ ಕಾರ್ಯಕರ್ತರೊಂದಿಗಿನ ನಂಬಿಕೆ ಹಾಗೂ ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡುವ ನಾಯಕ ಎಂಬ ಗುರುತನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಯುವ ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರು, ಪಕ್ಷದ ಸಂಘಟನೆಯಲ್ಲಿ ತಳಮಟ್ಟದ ಕಾರ್ಯಕರ್ತರಿಗೆ ಗೌರವ ಮತ್ತು ಆದ್ಯತೆ ನೀಡುವ ಆಶಯ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಜಿಲ್ಕಾ ಕೇಂದ್ರಕ್ಕೆ ಸ್ವಾಗತ ಬಯಸುವ ಕಿನ್ನಿಮೂಲ್ಕಿಯ ಗೋಪುರ ಉಳಿಸುವಲ್ಲಿ ಹೋರಾಟದ ಹಾದಿ ಅವರನ್ನು ಜಿಲ್ಲೆಯ ಜನತೆ ಗುರುತಿಸುವಂತೆ ಮಾಡಿದೆ.

ಕೃಷ್ಣಮೂರ್ತಿ ಆಚಾರ್ಯ ಅವರ ರಾಜಕೀಯ ಭವಿಷ್ಯಕ್ಕೆ ಈ ಬಾರಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಯ್ಕೆ ಮಹತ್ವದ ತಿರುವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!