ಯುವತಿಯ ಮಾನಭಂಗಕ್ಕೆ ಯತ್ನಿಸಿ ಥಳಿತಕ್ಕೊಳಗಾದ ಆರೋಪಿ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಆತ್ಮಹತ್ಯೆ

ಉಡುಪಿ: ಯುವತಿಯ ಮಾನಭಂಗಕ್ಕೆ ಯತ್ನಿಸಿ ಥಳಿತಕ್ಕೊಳಗಾದ ಆರೋಪಿ ಉಡುಪಿ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ನಡೆದಿದೆ.

ಹಿರಿಯಡ್ಕ ಠಾಣಾ ವ್ಯಾಪ್ತಿಯ ಪಾಡಿಗಾರದ ಪ್ರದೀಪ್ ಪೂಜಾರಿ (28) ಆತ್ಮಹತ್ಯೆಗೈದ ಆರೋಪಿ. ಈತ ಯುವತಿಯೋರ್ವಳನ್ನು ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಅ.27 ರಂದು ಯುವತಿ ಮನೆಗೆ ಹೋಗಿ ಗಲಾಟೆ ಮಾಡಿ, ತಾನು ಪ್ರೀತಿಸಿದ್ದ ಯುವತಿಗೆ ಹಾಗೂ ಆಕೆಯ ತಾಯಿಗೆ ಮೆಣಸಿನ ಹುಡಿ ಎರಚಿ ದಾಳಿ ಮಾಡಲು ಯತ್ನಿಸಿದ್ದ. ಮನೆಯವರ ಬೊಬ್ಬೆ ಕೇಳಿ ನೆರೆಕೆರೆಯವರು ಬಂದು ಪ್ರದೀಪ್ ಪೂಜಾರಿಗೆ ಹಲ್ಲೆ ನಡೆಸಿದ್ದರು.

ತನ್ನ ಮೇಲೆ ಹಲ್ಲೆ ಆಗಿದೆ ಎಂದು ಪ್ರದೀಪ್ ಹಿರಿಯಡ್ಕ ಠಾಣೆಗೆ ವಿಡಿಯೋ ಸಹಿತ ದೂರು ನೀಡಿದ್ದ. ಇನ್ನೊಂದೆಡೆ ಯುವತಿ ಮನೆಯವರು ಪ್ರದೀಪ್ ಪೂಜಾರಿ ವಿರುದ್ಧ ಮಹಿಳಾ ಠಾಣೆಗೆ ಮಾನಭಂಗ ಯತ್ನ ದೂರು ನೀಡಿದ್ದರು.

ತೀವ್ರವಾಗಿ ಹಲ್ಲೆಗೊಳಗಾದ ಪ್ರದೀಪ್ ಅ.27ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಇಂದು ಸಂಜೆ ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ತಾನು ಧರಿಸಿದ್ದ ಚಡ್ಡಿ ಲಾಡಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳದಲ್ಲೇ ಇದ್ದ ಪೊಲೀಸರು: ಆತನ ಮೇಲೆ ನಿಗಾ ಇರಿಸಲು ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೂ ಆತ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಹಲವು ಬಾರಿ ತನಗಾದ ಹಲ್ಲೆಯ ದೂರು ದಾಖಲಾಗಿದೆಯೇ ಎಂದು ಹಿರಿಯಡ್ಕ ಠಾಣೆಗೆ ಫೋನ್ ಮೂಲಕ ವಿಚಾರಿಸುತ್ತಿದ್ದ ಎನ್ನಲಾಗಿದೆ.

ಈ ಹಿಂದೆಯೂ ಅತ್ಯಾಚಾರ ಯತ್ನ ಕೇಸ್ ಅಲ್ಲಿ ಬಂಧಿಯಾಗಿದ್ದ ಪ್ರದೀಪ್ ಮತ್ತೆ ತಾನು ಜೈಲುಪಾಲಗಬಹುದು ಎಂದು ಹೆದರಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ.

ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡ ಪ್ರದೀಪ್ ಆತ್ಮಹತ್ಯೆ ಮಾಹಿತಿ ತಿಳಿದು ಶಾಸಕ ಗುರ್ಮೆ ಸುರೇಶ ಶೆಟ್ಟಿ ಸಹಿತ ಬಿಜೆಪಿ ಮುಖಂಡರು ಜಿಲ್ಲಾಸ್ಪತ್ರೆಗೆ ದೌಡಾಯಿಸಿದ್ದಾರೆ.

ಹಿರಿಯಡ್ಕ ಪೊಲೀಸರು ಪ್ರದೀಪ್ ನೀಡಿದ ದೂರನ್ನು ಸ್ವೀಕರಿಸಿದಿರುವ ಬಗ್ಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!