‘ನಡಿಗೆ’ ಅಭಿಯಾನಯದಲ್ಲಿ 20 ಸಾವಿರ ಜೋಡಿ ಪಾದರಕ್ಷೆ ಸಂಗ್ರಹ

ಉಡುಪಿ, ಅ.25: ಮನೆಯಲ್ಲಿ ಬಳಸಿದ ಅಥವಾ ಬಳಕೆಯಾಗದ ಉತ್ತಮ ಗುಣಮಟ್ಟದಲ್ಲಿರುವ ಪಾದರಕ್ಷೆಗಳನ್ನು ಹೊಸ ಪಾದರಕ್ಷೆಗಳಾಗಿ ಪರಿವರ್ತಿಸಿ ಬಡ ಮಕ್ಕಳಿಗೆ ಕೊಡುಗೆಯಾಗಿ ನೀಡುವ ಉದ್ದೇಶದಿಂದ ಮೂರು ದಿನಗಳ ಕಾಲ ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾದ ‘ನಡಿಗೆ’ ಸಾಮಾಜಿಕ ಅಭಿಯಾನದಲ್ಲಿ 20ಸಾವಿರ ಜೋಡಿ ಪಾದರಕ್ಷೆಗಳನ್ನು ಸಂಗ್ರಹಿಸಲಾಯಿತು.

ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪರಿಸರ ತಜ್ಞ ದಿನೇಶ್ ಹೊಳ್ಳ, ಇಂದು ಪರಿಸರದ ಮೇಲೆ ಸಾಕಷ್ಟು ದಾಳಿಗಳು ನಡೆಯುತ್ತಿವೆ. ಇದರ ಪರಿಣಾಮ ನಾವು ಮಳೆಗಾಲದಲ್ಲಿಯೇ ಬರಪೀಡಿತ ಪ್ರದೇಶಗಳ ಸರ್ವೆ ನಡೆಸುವ ಪರಿಸ್ಥಿತಿಗೆ ಬಂದಿದ್ದೇನೆ. ಪಶ್ಚಿಮ ಘಟ್ಟಗಳಲ್ಲಿ ಮಾನವ ಹಸ್ತಕ್ಷೇಪದಿಂದಾಗಿ ಇಂದು ಹಲವು ದುರಂತಗಳು ಸಂಭವಿಸುತ್ತಿವೆ. ಪ್ರತಿಯೊಂದು ಜೀವ ಸಂಕುಲಗಳು ಕೂಡ ಈ ಪರಿಸರಕ್ಕೆ ಅತೀ ಅಗತ್ಯವಾಗಿದೆ. ಅದನ್ನು ಕಾಪಾಡುವ ಕಾರ್ಯ ನಾವೆಲ್ಲ ಮಾಡಬೇಕು ಎಂದರು.

ಮುಂಬೈ ಗ್ರೀನ್‌ಸೋಲ್‌ನ ಸಹ ಸಂಸ್ಥಾಪಕ ರಮೇಶ್ ಧಾಮಿ, ಸಿಎಸ್‌ಆರ್ ವಿಭಾಗದ ಮುಖ್ಯಸ್ಥೆ ವಿನಿತಾ ಫೆರ್ನಾಂಡೀಸ್, ಕಾರ್ಕಳ ಕ್ರಿಯೆಟಿವ್ ಎಜುಕೇಶನ್ ಫೌಂಡೇಶನ್‌ನ ಅಶ್ವತ್ ಎಸ್.ಎಲ್., ಶ್ರೀಕೃಷ್ಣ ಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಯ ಚೆಯರ್‌ಮೆನ್ ಸಂಪತ್ ಶೆಟ್ಟಿ, ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‌ನ ಅರ್ಜುನ್ ಭಂಡಾರ್ಕರ್, ಕುಂದಾಪುರ ಸುಜ್ಞಾನ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ಭರತ್ ಶೆಟ್ಟಿ, ಅಬಿಗೇಲ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಡುಪಿಯ ಶಾಲೆಯೊಂದರ 30 ಮಕ್ಕಳಿಗೆ ಮುಂಬೈ ಗ್ರೀನ್‌ಸೋಲ್‌ನಲ್ಲಿ ತಯಾರಿಸಲಾದ ಪಾದರಕ್ಷೆ, ಬ್ಯಾಗ್ ಹಾಗೂ ಮ್ಯಾಟ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಆಯೋಜಕ ಅವಿನಾಶ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಉಪನ್ಯಾಸಕ ಸುಜಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಎಂಜಿಎಂ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಸಹಕರಿಸಿದರು.

ಈ ಅಭಿಯಾನದ ಮೂಲಕ ಸಂಗ್ರಹಿಸಲಾದ ಪಾದರಕ್ಷೆಗಳನ್ನು ಮುಂಬಯಿಯ ’ಗ್ರೀನ್‌ಸೋಲ್ ಫೌಂಡೇಷನ್’ಗೆ ಮಂಗಳವಾರ ಕಳುಹಿಸಿಕೊಡಲಾಗುತ್ತದೆ ಎಂದು ಸಂಘಟಕ ಅವಿನಾಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!