ಕುಂದಾಪುರ: ಕೆರೆಗೆ ಬಿದ್ದು ಇಬ್ಬರು ಮಕ್ಕಳು ಮೃತ್ಯು
ಕುಂದಾಪುರ, ಅ.25: ಬಟ್ಟೆ ಒಗೆಯಲೆಂದು ಹೋದ ಹೆಣ್ಣು ಮಕ್ಕಳಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ರವಿವಾರ ಸಂಜೆ ವೇಳೆ ಹೊಸಾಡು ಗ್ರಾಮದ ಕೊಪ್ಪರಿಗೆ ಗುಡ್ಡೆ ಎಂಬಲ್ಲಿ ನಡೆದಿದೆ.
ಮೃತರನ್ನು ಮುಳ್ಳಿಕಟ್ಟೆಯಲ್ಲಿ ಜೋಪಡಿಯಲ್ಲಿ ನೆಲೆಸಿದ್ದ ಮೂಲತಃ ಹಾವೇರಿ ಶಿಗ್ಗಾವಿ ತಾಲೂಕಿನ ಮುದ್ದಿನಕೊಪ್ಪದ ಚಂದ್ರು ಬಸವರಾಜ ವೇಷಗಾರ ಹಾಗೂ ಮಂಜಕಾಳು ದಂಪತಿಯ ಪುತ್ರಿ ಸುನೀತಾ (13) ಹಾಗೂ ಅವರ ಚಿಕ್ಕಪ್ಪನ ಮಗ ದಿ.ಮಂಜುನಾಥ ಹಾಗೂ ಶಾರದಾ ದಂಪತಿಯ ಪುತ್ರಿ ವೈಶಾಲಿ (13) ಎಂದು ಗುರುತಿಸಲಾಗಿದೆ. ಇವರಿಬ್ಬರು ಹೊಸಾಡು ಸರಕಾರಿ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು.
ಹೊಸಾಡು ಗ್ರಾಮದ ಕೊಪ್ಪರಿಗೆ ಗುಡ್ಡೆಯ ಕಡುಬಿನ ಕೆರೆಗೆ ರವಿವಾರ ಸಂಜೆ 4 ರ ಸುಮಾರಿಗೆ ಬಟ್ಟೆ ಒಗೆಯಲೆಂದು ಜೋಪಡಿಯ ಐವರು ಮಕ್ಕಳು ತರೆಳಿದ್ದರು. ಈ ವೇಳೆಗೆ ಸುನೀತಾ ಹಾಗೂ ವೈಶಾಲಿ ಕೆರೆಯ ದಡದಲ್ಲಿ ಬಟ್ಟೆ ತೊಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ, ಕೆರೆಗೆ ಬಿದ್ದು, ನೀರಲ್ಲಿ ಮುಳುಗಿ ಸಾವನ್ನಪ್ಪಿದರು ಎಂದು ತಿಳಿದುಬಂದಿದೆ.
ಇಬ್ಬರು ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಗಂಗೊಳ್ಳಿಯ ಮುಳುಗು ತಜ್ಞ ದಿನೇಶ್ ಖಾರ್ವಿ ತಂಡ, ಟೀಮ್ ಹೆಚ್‌ಐ ತುರ್ತು ಸ್ಪಂದನ ತಂಡ, ಕುಂದಾಪುರದ ಅಗ್ನಿ ಶಾಮಕ ದಳದವರು, ಗಂಗೊಳ್ಳಿ ಪೊಲೀಸರು ಆಗಮಿಸಿ, ಮೃತದೇಹಗಳನ್ನು ಮೇಲೆತ್ತಲು ಸಹಕರಿಸಿದರು.
ಗಂಗೊಳ್ಳಿಯ ಶ್ರೀವೀರೇಶ್ವರ ಸೇವಾ ಟ್ರಸ್ಟ್‌ನ ಆಂಬುಲೆನ್ಸ್‌ನವರು ಮೃತದೇಹಗಳನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲು ಸಹಕರಿಸಿದರು. ಘಟನಾ ಸ್ಥಳಕ್ಕೆ ಗಂಗೊಳ್ಳಿ ಪಿಎಸ್‌ಐ ಪವನ್ ನಾಯಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.





