ಉಡುಪಿ ಜಿಲ್ಲೆಯಲ್ಲಿ ಎಸ್ಟಿ ಮೀಸಲಾತಿಯಲ್ಲಿ ಪುರುಷರಿಗೂ ಅವಕಾಶ ಕಲ್ಪಿಸಲು ಆಗ್ರಹ
Oplus_131072
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಮೀಸಲಾತಿ ಮರುಪರಿಶೀಲನೆಗೆ ಸರ್ಕಾರಕ್ಕೆ ಮನವಿ
ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಟ್ಟಿರುವುದರಿಂದ ಪರಿಶಿಷ್ಟ ಪಂಗಡದ ಪುರುಷರು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೀಸಲಾತಿ ನಿಯಮಾವಳಿಗಳನ್ನು ಮರುಪರಿಶೀಲಿಸಿ, ಪರಿಶಿಷ್ಟ ಪಂಗಡದ ಪುರುಷರಿಗೂ ಪ್ರಾತಿನಿಧ್ಯ ದೊರೆಯುವಂತೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಚೇರ್ಕಾಡಿಯ ಉಮೇಶ್ ಎ. ನಾಯ್ಕ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿರುವ ಅವರು, ತಾವು ಪರಿಶಿಷ್ಟ ಪಂಗಡದ ಮರಾಠಿ ಸಮುದಾಯಕ್ಕೆ ಸೇರಿದವರಾಗಿದ್ದು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಿವಾಸಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಮನವಿಯಲ್ಲಿ ಉಲ್ಲೇಖಿಸಿರುವಂತೆ, ಬ್ರಹ್ಮಾವರ ತಾಲೂಕು ಪಂಚಾಯತ್ನಲ್ಲಿ ಒಟ್ಟು 16 ಸ್ಥಾನಗಳಿದ್ದು, ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನ ಮೀಸಲಾಗಿದೆ. ಆದರೆ, ಆ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಅದೇ ರೀತಿ, ಉಡುಪಿ ಜಿಲ್ಲಾ ಪಂಚಾಯತ್ನ ಒಟ್ಟು 28 ಸ್ಥಾನಗಳ ಪೈಕಿ ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಒಂದು ಸ್ಥಾನವೂ ಮಹಿಳೆಯರಿಗೆ ಮೀಸಲಾಗಿದೆ.
ಹೀಗಾಗಿ, ಪರಿಶಿಷ್ಟ ಪಂಗಡದ ಪುರುಷರಿಗೆ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಮೀಸಲಾತಿಯಡಿ ಸ್ಪರ್ಧಿಸಲು ಅವಕಾಶವಿಲ್ಲದಂತಾಗಿದೆ. ಇದರಿಂದ ಮರಾಠಿ, ಮಲೆಕುಡಿಯ ಹಾಗೂ ಕೊರಗ ಸಮುದಾಯಗಳ ಪುರುಷರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಾತಿನಿಧ್ಯ ಪಡೆಯಲು ತೊಂದರೆಯಾಗುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಹಾಸನ ಜಿಲ್ಲಾ ಪಂಚಾಯತ್ನಲ್ಲಿ ಪರಿಶಿಷ್ಟ ಪಂಗಡಕ್ಕೆ ಒಂದೇ ಸ್ಥಾನವಿದ್ದರೂ ಪುರುಷರು ಹಾಗೂ ಮಹಿಳೆಯರು ಸ್ಪರ್ಧಿಸಲು ಅವಕಾಶ ಕಲ್ಪಿಸಿರುವುದನ್ನು ಉಲ್ಲೇಖಿಸಿರುವ ಅವರು, ಉಡುಪಿ ಜಿಲ್ಲೆಯಲ್ಲಿಯೂ ಮೀಸಲಾತಿ ಹಂಚಿಕೆಯಲ್ಲಿ ಸಮಾನ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುವ ಉದ್ದೇಶ ತಮ್ಮದಲ್ಲ. ಆದರೆ, ಮಹಿಳಾ ಮೀಸಲಾತಿಯ ಕಾರಣದಿಂದ ಪರಿಶಿಷ್ಟ ಪಂಗಡದ ಪುರುಷರಿಗೆ ಜನಪ್ರತಿನಿಧಿಗಳಾಗುವ ಅವಕಾಶವೇ ಇಲ್ಲದಂತಾಗಬಾರದು. ಸಮುದಾಯದ ಪ್ರತಿಭಾವಂತ ಪುರುಷರು ಕೂಡ ಸಾರ್ವಜನಿಕ ಸೇವೆ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಮೀಸಲಾತಿ ವ್ಯವಸ್ಥೆಯನ್ನು ಮರುಪರಿಶೀಲಿಸಿ, ಅಗತ್ಯವಿದ್ದಲ್ಲಿ ಕಾಯ್ದೆ ಹಾಗೂ ನಿಯಮಾವಳಿಗಳಲ್ಲಿ ಸೂಕ್ತ ತಿದ್ದುಪಡಿ ತಂದು ಪರಿಶಿಷ್ಟ ಪಂಗಡದ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಅವಕಾಶ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಉಡುಪಿ ಜಿಲ್ಲೆಯ ಪರಿಶಿಷ್ಟ ಪಂಗಡದ ಪುರುಷರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಉಮೇಶ್ ಎ. ನಾಯ್ಕ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.





