ಮುಂದಿನ ಏಶ್ಯನ್ ಗೇಮ್ಸ್‌ನಲ್ಲೂ ಚಿನ್ನ ಗೆಲ್ಲುವೆ: ಪೂವಮ್ಮ

ಮಂಗಳೂರು : ಬದುಕಿನಲ್ಲಿ ಆನೇಕ ಏಳು ಬೀಳು ಗಾಯದ ಸಮಸ್ಯೆ ಎದುರಿಸಿದ್ದೇನೆ. ಸೋತು ಗೆದ್ದಿದ್ದೇನೆ. ಎಲ್ಲವನ್ನು ಬದುಕಿನಲ್ಲಿ ನೋಡಿದ್ದೇನೆ. ಸಾಧನೆಗೆ ವಯಸ್ಸು ಅಡ್ಡಿಯಾಗದು. ಮುಂದಿನ ಏಶ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನದ ಪದಕದೊಂದಿಗೆ ವಾಪಸಾಗುವೆನು ಎಂದು ಎಂದು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಎಂ.ಆರ್. ಪೂವಮ್ಮ ಹೇಳಿದ್ದಾರೆ.

ಏಷ್ಯನ್ ಗೇಮ್ಸ್‌ನ 400×400 ಮೀ. ಮಹಿಳೆಯರ ರಿಲೇ ಸ್ಪರ್ಧೆಯಲ್ಲಿ ಚಿನ್ನ ಮತ್ತು 400×400 ಮೀ. ಮಿಶ್ರ ರಿಲೇ ಬೆಳ್ಳಿ ಪದಕ ಗೆದ್ದು ಮಂಗಳೂರಿಗೆ ಆಗಮಿಸಿದ ಅವರು, ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

ಜೀವನದಲ್ಲಿ ಯಶಸ್ಸು, ವೈಫಲ್ಯ ಬದುಕಿನಲ್ಲಿ ಸಹಜ. ಯಾವಾಗಲೇ ಯಶಸ್ಸನ್ನೇ ನೋಡಬೇಕಿಲ್ಲ. ವೈಫಲ್ಯ ಅನುಭವಿಸಿದಾಗ ಮುಂದೆ ಯಶಸ್ಸಿಗಾಗಿ ಪ್ರಯತ್ನಿಸಲು ಸಾಧ್ಯವಾಗುತ್ತದೆ ಎಂದರು.

ಚಿನ್ನ ಗೆಲ್ಲಲೇಬೇಕು ಎಂದು ದೃಢ ಸಂಕಲ್ಪ :

ಏಶ್ಯನ್ ರಿಲೇ ಸ್ಪರ್ಧೆಯ ಅನುಭವ ಹಂಚಿಕೊಂಡ ಪೂವಮ್ಮ, ಕಳೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಸಿಕ್ಕಿತ್ತು. ಹೀಗಾಗಿ ಈ ಬಾರಿ ’ಮಾಡು ಇಲ್ಲವೇ ಮಡಿ’ ತಂತ್ರದೊಂದಿಗೆ ಕಣಕ್ಕಿಳಿದು ಚಿನ್ನ ಗೆಲ್ಲಲೇಬೇಕೆಂಬ ದೃಢ ನಿರ್ಧಾರ ಮಾಡಿದ್ದೆವು. ಬಹರೈನ್ ಹಾಗೂ ಚೀನಾ ಅಥ್ಲೀಟ್‌ಗಳ ತೀವ್ರ ಪೈಪೋಟಿಯ ನಡುವೆಯೂ ಉತ್ತಮ ಮುನ್ನಡೆ ಒದಗಿಸುವಲ್ಲಿ ಯಶಸ್ವಿಯಾದೆವು. ಅಥ್ಲೆಟಿಕ್ ಮೈದಾನದಲ್ಲಿ ಮೊಳಗಿದ ಕ್ಷಣ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿತ್ತು ಎಂದು ಸಂತಸ ವ್ಯಕ್ತಪಡಿಸಿದರು.

ಅಂತರ್‌ರಾಷ್ಟ್ರೀಯ, ವಿಶ್ವ ಮಟ್ಟದಲ್ಲಿ ಪದಕ ಗೆಲ್ಲುವ ಕೇಂದ್ರ ಸರಕಾರದಿಂದ ಪ್ರೋತ್ಸಾಹ ಚೆನ್ನಾಗಿದೆ. ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ದೊರೆಯುವ ಪ್ರೋತ್ಸಾಹ ಧನ ತೀರ ಕಡಿಮೆ ಇದ್ದು, ಉಳಿದ ರಾಜ್ಯಗಳ ಮಾದರಿಯಲ್ಲಿ ತಕ್ಷಣ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಹರಿಯಾಣ, ಪಂಜಾಬ್ ಹಾಗೂ ಕೇರಳದಂತಹ ರಾಜ್ಯಗಳಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಿಗೆ 3ರಿಂದ 4 ಕೋಟಿ ರೂಪಾಯಿ ನಗದು ಬಹುಮಾನ ಹಾಗೂ ಡಿವೈಎಸ್ಪಿ ಶ್ರೇಣಿಯ ಉನ್ನತ ಸರಕಾರಿ ಉದ್ಯೋಗ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಚಿನ್ನದ ಪದಕಕ್ಕೆ ನೀಡುತ್ತಿರುವ ಮೊತ್ತ ಕೇವಲ 35 ಲಕ್ಷ ರೂಪಾಯಿ ಮಾತ್ರ. ಈ ತಾರತಮ್ಯವನ್ನು ಸರಿಪಡಿಸಿ ಕರ್ನಾಟಕದ ಕ್ರೀಡಾಪಟುಗಳಿಗೆ ಅರ್ಹ ಗೌರವ ಮತ್ತು ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಇತರ ರಾಜ್ಯಗಳ ಅಥ್ಲೀಟ್‌ಗಳು ಪದಕ ಗೆದ್ದ ತಕ್ಷಣ ಅವರ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕ್ರೀಡಾ ಸಚಿವರು ಕರೆ ಮಾಡಿ ಅಭಿನಂದಿಸುತ್ತಿದ್ದರು. ಆದರೆ ಕಳೆದ 23 ವರ್ಷಗಳಿಂದ ಕರ್ನಾಟಕವನ್ನು ಪ್ರತಿನಿಧಿಸಿ ದೇಶಕ್ಕೆ ಹಿರಿಮೆ ತಂದರೂ, ಈಗ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದರೂ ಆ ಕ್ಷಣದಲ್ಲಿ ರಾಜ್ಯ ಸರಕಾರದಿಂದ ಒಂದೂ ಅಭಿನಂದನೆಯ ಕರೆ ಬರಲಿಲ್ಲ. ಈಗಾಗಿ ನನಗೆ ತುಂಬಾ ಬೇಸರ ಆಗಿತ್ತು. ಭಾರತಕ್ಕೆ ಮರಳಿದ ಮೇಲಷ್ಟೇ ಗುರುವಾರ ಸಿಎಂ ಡಿಕೆ ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿದಂತೆ ಅನೇಕರು ಕರೆ ಮಾಡಿ ಮಾತನಾಡಿದರು ಎಂದು ಎಂ.ಆರ್.ಪೂವಮ್ಮ ತಮ್ಮ ನೋವು ತೋಡಿಕೊಂಡರು.

ತಮ್ಮ ಪ್ರತಿಭೆಯನ್ನು ಗುರುತಿಸಿ ಬೆಳೆಸಿದ ತರಬೇತುದಾರರಾದ ವಸಂತ್, ದಿನೇಶ್ ಕುಂದರ್ ಹಾಗೂ ಸದಾ ಬೆನ್ನೆಲುಬಾಗಿ ನಿಂತ ಕುಟುಂಬದ ಬೆಂಬಲವೇ ಈ ಸುದೀರ್ಘ ಸಾಧನೆಗೆ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

ಐವನ್ ಡಿ ಸೋಜ ಭರವಸೆ :ಸುದ್ದಿಗೋಷ್ಠಿಯಲ್ಲಿ ಪೂವಮ್ಮ ಅವರ ಬೇಸರಕ್ಕೆ ಅದೇ ವೇದಿಕೆಯಲ್ಲಿ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಇತರ ರಾಜ್ಯಗಳಲ್ಲಿ ನೀಡುತ್ತಿರುವ ಮಾದರಿಯಲ್ಲೇ ಸಮಾನ ಪ್ರಮಾಣದ ಪ್ರೋತ್ಸಾಹಧನ, ಸರ್ಕಾರಿ ಉದ್ಯೋಗ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಆಡಳಿತಾರೂಢ ಪಕ್ಷದ ಪರವಾಗಿ ರಾಜ್ಯ ಸರಕಾರ ಮನವರಿಕೆ ಮಾಡಿಕೊಡುವುದಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಭರವಸೆ ನೀಡಿದರು.

ಪೂವಮ್ಮ ಅವರ ತಾಯಿ ಅವರ ವೀಡಿಯೊ ಹೇಳಿಕೆಯನ್ನು ನಾನು ಗಮನಿಸಿದ ತಕ್ಷಣ ಕ್ರೀಡಾ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು, ವೀಡಿಯೊವನ್ನು ಅವರಿಗೆ ಫಾರ್ವರ್ಡ್ ಮಾಡಲಾಗಿದೆ. ಇತರ ರಾಜ್ಯಗಳು ನೀಡುವಷ್ಟೇ ಸಮಾನ ಮೊತ್ತದ ನಗದು ಬಹುಮಾನವನ್ನು ನಮ್ಮ ರಾಜ್ಯದ ಕ್ರೀಡಾಪಟುಗಳಿಗೂ ಒದಗಿಸಲು ಕ್ರೀಡಾ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಪೂವಮ್ಮ ಅವರ ತಾಯಿ ಜಾಜಿ ರಾಜು, ತಂದೆ ಎಂಜಿ ರಾಜು, ಪತಿ ಜಿತಿನ್ ಪಾಲ್, ಮೊಹ್ತಿಶ್ಯಾಂ ಸಂಸ್ಥೆಯ ನಿರ್ದೇಶಕರಾದ ಸೈಯದ್ ಮುಹಮ್ಮದ್‌ಅರ್ಶದ್, ಸೈಯದ್ ಮುಹಮ್ಮದ್ ಸವೊದ್, ಪೂವಮ್ಮರ ತರಬೇತುದಾರ ದಿನೇಶ್ ಕುಂದರ್, ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಮುಡಾ ಮಾಜಿ ಅಧ್ಯಕ್ಷ ತೇಜೋಮಯ , ಡೈಜಿವರ್ಲ್ಡ್ ಟಿವಿಯ ಅಲೆಕ್ಸ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!