ಕಂಪನಿಯ QR ಬದಲು ವೈಯಕ್ತಿಕ QR ಬಳಸಿ ₹12 ಲಕ್ಷ ವಂಚನೆ ಆರೋಪ
ಮಣಿಪಾಲದ ಇ-ಮೊಬಿಲಿಟಿ ಕಂಪನಿಯ ಮಾಜಿ ನೌಕರರು ಸೇರಿ ಏಳು ಮಂದಿ ವಿರುದ್ಧ ಪ್ರಕರಣ
ಉಡುಪಿ, ಅ.2: ಮಣಿಪಾಲದ ಎಂಐಟಿ ಕ್ಯಾಂಪಸ್‌ನಲ್ಲಿರುವ Indeanta E-Mobility Pvt. Ltd. ಕಂಪನಿಗೆ ಬರಬೇಕಿದ್ದ ಪ್ರಯಾಣಿಕರ ಶುಲ್ಕವನ್ನು ಕಂಪನಿಯ ಖಾತೆಗೆ ಜಮೆ ಮಾಡದೆ, ವೈಯಕ್ತಿಕ ಮರ್ಚೆಂಟ್ QR ಕೋಡ್ ಮೂಲಕ ಸಂಗ್ರಹಿಸಿ ಸುಮಾರು ₹12 ಲಕ್ಷ ವಂಚನೆ ಮಾಡಿದ ಆರೋಪದ ಮೇಲೆ ಏಳು ಮಂದಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕಿ ದಿವ್ಯ ಯತೀನ್ ಶೆಟ್ಟಿ ಅವರು ನೀಡಿದ ದೂರಿನ ಆಧಾರದ ಮೇಲೆ ಸಿದ್ದಮೂರ್ತಿ ಜಿ., ಶಿವರಾಜ್ ನಾಯಕ್, ಸುದೀಪ್, ಜಿತೇಶ್ ಎಲ್. ಕಾಂಚನ್, ಎಂ.ಬಿ. ಅವಿನಾಶ್, ಮುತ್ತಣ್ಣ ಆದಿನವರ್ ಹಾಗೂ ಐಶ್ವರ್ಯ ಮುತ್ತಣ್ಣ ಆದಿನವರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸ್ ದೂರಿನ ಪ್ರಕಾರ, ಆರೋಪಿಗಳ ಪೈಕಿ ಆರು ಮಂದಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2026ರ ಏಪ್ರಿಲ್ 1ರಿಂದ ಕಂಪನಿಗೆ ಬರಬೇಕಿದ್ದ ಪ್ರಯಾಣಿಕರ ಶುಲ್ಕವನ್ನು ಕಂಪನಿಯ ಅಧಿಕೃತ QR ಕೋಡ್ ಮೂಲಕ ಸ್ವೀಕರಿಸದೆ, ವೈಯಕ್ತಿಕ ಮರ್ಚೆಂಟ್ QR ಕೋಡ್ ಬಳಸಿ ಸಂಗ್ರಹಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಮೂಲಕ ಸಂಗ್ರಹವಾದ ಸುಮಾರು ₹12,00,000 ಮೊತ್ತವನ್ನು ಮುತ್ತಣ್ಣ ಆದಿನವರ್ ಅವರ ಪತ್ನಿ ಐಶ್ವರ್ಯ ಮುತ್ತಣ್ಣ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು, ಆರೋಪಿತರು ಪರಸ್ಪರ ಹಂಚಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಂಪನಿಗೆ ಸೇರಬೇಕಿದ್ದ ಹಣವನ್ನು ದುರುಪಯೋಗಪಡಿಸಿಕೊಂಡು ವಂಚನೆ, ಮೋಸ ಹಾಗೂ ನಂಬಿಕೆ ದ್ರೋಹ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.





