ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಆಗ್ರಹಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ
‘SIR’ ಪ್ರಕ್ರಿಯೆ ಹೆಸರಿನಲ್ಲಿ ಮತದಾರರಿಗೆ ವಿಶ್ವಾಸದ್ರೋಹ ಹಾಗೂ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಹುನ್ನಾರ: ನಾಯಕರ ಆಕ್ರೋಶ
ಉಡುಪಿ: “ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸ್ವತಂತ್ರ ಚುನಾವಣಾ ಆಯೋಗದ ಮುಖ್ಯಸ್ಥರಂತೆ ವರ್ತಿಸುತ್ತಿಲ್ಲ, ಬದಲಿಗೆ ಬಿಜೆಪಿಯ ಎಲೆಕ್ಷನ್ ಮೋರ್ಚಾದ ಅಧ್ಯಕ್ಷರಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಸ್ವತಂತ್ರವಾಗಿ ಕಾರ್ಯಾಚರಿಸಬೇಕಾದ ಆಯೋಗವು ಆಡಳಿತಾರೂಢ ಪಕ್ಷದ ಯುವಮೋರ್ಚಾದಂತೆ ಕೆಲಸ ಮಾಡುತ್ತಿರುವುದು ಆಘಾತಕಾರಿ. ಕೋಟ್ಯಾಂತರ ಜನರನ್ನು ಮತದಾನದ ಹಕ್ಕಿನಿಂದ ದೂರವಿಟ್ಟದ್ದು ಇತಿಹಾಸದಲ್ಲಿ ಹಿಟ್ಲರ್ ಮಾತ್ರ. ಇಂದು ದೇಶದಲ್ಲಿ ಬಡವರು, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ, ಅವರನ್ನು ನೇರವಾಗಿ ಎದುರಿಸಲಾಗದೆ SIR ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ,” ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಸಹಬಾಳ್ವೆಯ ನಿಕಟಪೂರ್ವ ಅಧ್ಯಕ್ಷರಾದ ಅಮೃತ್ ಶೆಣೈ ಕಿಡಿಕಾರಿದರು.
ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜಿನಾಮೆಗೆ ಒತ್ತಾಯಿಸಿ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ಆಯೋಜಿಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು, “ಇಲ್ಲಸಲ್ಲದ ದಾಖಲೆಗಳನ್ನು ಕೇಳಿ ಸಾರ್ವಜನಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಸಂಘಪರಿವಾರದ ನಾಯಕರು ವಿದೇಶಕ್ಕೆ ಹೋದಾಗ ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತದೆ, ಆದರೆ ದೇಶದೊಳಗೆ ಹಿಂದುತ್ವದ ಮುಖವಾಡ ಹೊತ್ತು ಶ್ರೀಮಂತರಿಗಾಗಿ ಕೆಲಸ ಮಾಡುತ್ತಿದೆ ಎಂದರು.
ಬೀಫ್ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಸರ್ಕಾರದ ಎಲ್ಲಾ ಧೋರಣೆಗಳು ಡೋಂಗಿತನದಿಂದ ಕೂಡಿದೆ. ಪಾರದರ್ಶಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವುದೇ ಪ್ರಜಾಪ್ರಭುತ್ವದ ಸಾರ. ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ಸರಿಯಾದ ಹೋರಾಟ ಸಂಘಟಿಸಿದರೆ ಜ್ಞಾನೇಶ್ ಕುಮಾರ್ ಅವರ ಅಕ್ರಮಗಳು ಹೊರಬರಲಿವೆ,” ಎಂದರು.
ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷರಾದ ಇದ್ರಿಸ್ ಹೂಡೆ ಮಾತನಾಡಿ, ಚುನಾವಣಾ ಆಯೋಗವು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ ಹಾಗೂ ‘SIR’ (ವಿಶೇಷ ಪರಿಶೀಲನೆ) ಪ್ರಕ್ರಿಯೆಯ ಹೆಸರಿನಲ್ಲಿ ಮತದಾರರಿಗೆ ವಿಶ್ವಾಸದ್ರೋಹ ಎಸಗುತ್ತಿದೆ ಎಂದು ಆರೋಪಿಸಿದರು.
“ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹಂತ ಹಂತವಾಗಿ ಮುಗಿಸಿ ರಾಜಸತ್ತೆಯತ್ತ ಕೊಂಡೊಯ್ಯುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಬರಿ ಪ್ರಹಸನವಾಗಿ ಮಾರ್ಪಟ್ಟಿದ್ದು, ಪೂರ್ವನಿರ್ಧರಿತವಾಗಿ ಸೋಲು-ಗೆಲುವುಗಳನ್ನು ನಿರ್ಧರಿಸಲಾಗುತ್ತಿದೆ. ಇದು ಸ್ಪಷ್ಟವಾಗಿ ಸತ್ತ ಚೋರಿ (ಮತಗಳ ಕಳವು)” ಎಂದು ಅವರು ಆಕ್ರೋಶ ಹೊರಹಾಕಿದರು.
ಇವಿಎಮ್ (EVM) ಯಂತ್ರಗಳ ದುರ್ಬಳಕೆಯ ಆರೋಪಗಳ ನಡುವೆಯೇ, ಇದೀಗ ಒಂದು ಹೆಜ್ಜೆ ಮುಂದುವರಿದು ‘SIR’ ಪ್ರಕ್ರಿಯೆಯ ಮೂಲಕ ವಿರೋಧ ಪಕ್ಷದ ಬೆಂಬಲಿತ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗುತ್ತಿದೆ. ವೆಬ್‌ಸೈಟ್‌ನಲ್ಲಿ ಮಾಡಲಾದ ಪ್ರಮುಖ ಬದಲಾವಣೆಗಳನ್ನು ಉಳಿದ ಇಬ್ಬರು ಚುನಾವಣಾ ಆಯುಕ್ತರ ಗಮನಕ್ಕೂ ತರದೆ ಏಕಪಕ್ಷೀಯವಾಗಿ ಮಾಡಲಾಗಿದೆ ಎಂಬ ಅಂಶ ಮಾಧ್ಯಮ ವರದಿಗಳಿಂದ ಬಹಿರಂಗಗೊಂಡಿದೆ. ಇದು ಪ್ರಜಾಪ್ರಭುತ್ವದ ಕತ್ತು ಹಿಸುಕಿ ಸರ್ವಾಧಿಕಾರಿ ಧೋರಣೆಯತ್ತ ಸಾಗುತ್ತಿರುವ ಸ್ಪಷ್ಟ ಲಕ್ಷಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದಲಿತ ಹಿತರಕ್ಷಣಾ ವೇದಿಕೆಯ ಸಂಜೀವ್ ಬಳ್ಕೂರ್ ಮಾತನಾಡಿ, “SIR ಪ್ರಕ್ರಿಯೆಯು ಸಂವಿಧಾನ ವಿರೋಧಿ ಹಾಗೂ ದೇಶದ್ರೋಹಿ ನಡವಳಿಕೆಯಾಗಿದೆ. ಸಂವಿಧಾನ ನೀಡಿದ ಪವಿತ್ರ ಮತದಾನದ ಹಕ್ಕಿನಿಂದ ಜನರನ್ನು ವಂಚಿಸಲಾಗುತ್ತಿದ್ದು, ಈ ಕಾಯಿದೆಯನ್ನು ಯಾವುದೇ ಪೂರ್ವನ್ವಯವಿಲ್ಲದೆ ತಕ್ಷಣವೇ ರದ್ದುಗೊಳಿಸಬೇಕು,” ಎಂದು ಆಗ್ರಹಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಅಬ್ದುಲ್ ಅಝೀಜ್ ಉದ್ಯಾವರ ನೆರವೇರಿಸಿದರು. ಪ್ರಮುಖರಾದ ಕುಶಲ, ವೆಲ್ಫೇರ್ ಪಾರ್ಟಿಯ ಉಪಾಧ್ಯಕ್ಷರಾದ ವಿಜಯ ಪಡುಕುದ್ರು, ಸಾಮಾಜಿಕ ಹೋರಾಟಗಾರ ಚಾರ್ಲ್ಸ್ ಅಂಬ್ಲೇರ್, ಅನ್ವರ್ ಅಲಿ ಕಾಪು, ಆಸೀಪ್ ಜಿಡಿ, ಮಮ್ತಾಝ್ ಹೂಡೆ, ಅಬ್ದುಲ್ ರಝಾಕ್ ನಕ್ವಾ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಪ್ರತಿಭಟನಾಕಾರರ ಮುಖ್ಯ ಬೇಡಿಕೆಗಳು:
ಸಿಇಸಿ ರಾಜಿನಾಮೆ: ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತಂದಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣವೇ ರಾಜಿನಾಮೆ ನೀಡಬೇಕು.
SIR ಪ್ರಕ್ರಿಯೆ ರದ್ದು: ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ‘SIR’ ಪ್ರಕ್ರಿಯೆಯನ್ನು ತಕ್ಷಣವೇ ಹಿಂಪಡೆಯಬೇಕು.
ಮತದಾರರ ಪಟ್ಟಿ ಪುನಃಸ್ಥಾಪನೆ: ಪಟ್ಟಿಯಿಂದ ಅಕ್ರಮವಾಗಿ ತೆಗೆದುಹಾಕಲಾದ ಎಲ್ಲಾ ಮತದಾರರ ಹೆಸರುಗಳನ್ನು ತಕ್ಷಣವೇ ಮರು ಸೇರ್ಪಡೆಗೊಳಿಸಬೇಕು.
ಚುನಾವಣಾ ಆಯೋಗದ ಸ್ವಾಯತ್ತತೆ: ಚುನಾವಣಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ರಾಜಕೀಯ ಹಸ್ತಕ್ಷೇಪವನ್ನು ತಡೆಯಬೇಕು.





