ಕಾಪು ಹೊಸ ಮಾರಿಗುಡಿ ದೇವಸ್ಥಾನ: ನವದುರ್ಗಾ ಲೇಖನ ಯಜ್ಞ ಮಹಾ ಅಭಿಯಾನಕ್ಕೆ ಚಾಲನೆ
ಕಾಪು: ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅಮ್ಮನಿಗೊಂದು ಅಕ್ಷರ ನಮನ ನವದುರ್ಗಾ ಲೇಖನ ಯಜ್ಞ ಮಹಾ ಅಭಿಯಾನದ ಅಂಗವಾಗಿ ಗುರುವಾರ ಮಾತೃಕಾ ಶಕ್ತಿ ಪೂಜೆ ಸಂಪನ್ನಗೊಂಡಿತು.
ಅಭಿಯಾನದ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುರಸಭಾಧ್ಯಕ್ಷೆ ಮೋಹಿನಿ ಶೆಟ್ಟಿ, ಭಾರತ್ ಸ್ಕೌಟ್ ಗೈಡ್ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಮುಂಬೈನ ಉದ್ಯಮಿ ಕೃಷ್ಣ ವೈ.ಶೆಟ್ಟಿ, ವಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಚೇರ್ಮನ್ ಪ್ರತಾಪ್ ಹೆಗ್ಡೆ ಮಾರಾಳಿ, ಕಾಪು ಸಿಎ ಬ್ಯಾಂಕ್ ಅಧ್ಯಕ್ಷ ದಿವಾಕರ ಶೆಟ್ಟಿ, ನವೀನ್ ಚಂದ್ರ ಅಳ್ವ ತಿರುವೈಲುಗುತ್ತು, ಸಂಪತ್ ಕುಮಾರ್ ಶೆಟ್ಟಿ ದೀಪ ಪ್ರಜ್ವಲಿಸಿದರು.

ಮಾತೃಕಾ ಶಕ್ತಿ ಪೂಜಾ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ಎಂ.ಆರ್.ಜಿ.ಗ್ರೂಪ್ ಚೇರ್ಮನ್ ಕೆ.ಪ್ರಕಾಶ್ ಶೆಟ್ಟಿ, ಮುಂಬೈ ವಿ.ಕೆ.ಗ್ರೂಪ್ ಆಫ್ ಕಂಪೆನಿ ಚೇರ್ಮನ್ ಕೆ.ಎಂ.ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರ್ಣಾಟಕ ಬ್ಯಾಂಕ್ ಮುಖ್ಯ ಮಹಾ ಪ್ರಬಂಧಕ ಚಂದ್ರಶೇಖರ್, ಶಂಕರ್ ಎಲೆಕ್ಟಿಕಲ್ಸ್ ಆಡಳಿತ ನಿರ್ದೇಶಕ ರಾಜೇಶ್ ಶೆಟ್ಟಿ, ಉಮಾಕೃಷ್ಣ ಶೆಟ್ಟಿ ಮುಂಬೈ, ಕೃಷ್ಣಪ್ರಸಾದ್ ಕ್ಯಾಶೂಸ್‌ನ ವ್ಯವಸ್ಥಾಪಕ ನಿರ್ದೇಶಕ ಸಂಪತ್ ಕುಮಾರ್ ಶೆಟ್ಟಿ, ಯೂರಿಯಾನ್ ಆಫ್ ಇಂಡಿಯಾ ಸೀನಿಯರ್ ಪ್ಯಾನೆಲ್ ಕೌನ್ಸಿಲ್ ಶ್ವೇತಾ ಕೃಷ್ಣಪ್ಪ, ದೇವಿಪ್ರಸಾದ್ ಕನ್‌ಸ್ಟ್ರಕ್ಷನ್ಸ್ ಆಡಳಿತ ನಿರ್ದೇಶಕಿ ಬೀನಾ ವಾಸುದೇವ ಶೆಟ್ಟಿ ದೀಪ ಬೆಳಗಿಸಿದರು.

ಹೊಸ ಮಾರಿಗುಡಿಯ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿ, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಮಾತೃಕಾ ಶಕ್ತಿ ಪೂಜೆಯ ಪೌರೋಹಿತ್ಯ ವಹಿಸಿದ್ದರು.
ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರತಿನಿಧಿ ಶೇಖರ್ ಸಾಲ್ಯಾನ್, ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ, ವ್ಯವಸ್ಥಾಪನಾ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿ, ಕಾಪು ಚಾರಿಟಬಲ್ ಟ್ರಸ್ಟ್‌ನ ಪದಾಧಿಕಾರಿಗಳು, ಟ್ರಸ್ಟಿಗಳು ಉಪಸ್ಥಿತರಿದ್ದರು.

ಕಾಪು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭಗವಾನ್ ದಾಸ್ ಕೆ. ಪ್ರಸ್ತಾವನೆಗೈದರು. ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು, ನವದುರ್ಗಾ ಲೇಖನ ಯಜ್ಞ ಮಹಾ ಅಭಿಯಾನದ ಕುರಿತಾಗಿ ಮಾಹಿತಿ ನೀಡಿದರು. ಕಾರ್ಯಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ವಂದಿಸಿದರು. ದಾಮೋದರ ಶರ್ಮಾ ಬಾರ್ಕೂರು, ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.
ಕಾಪು ಚಾರಿಟಬಲ್ ಉದ್ಘಾಟನೆ: ಕಾಪು ಚಾರಿಟಬಲ್ ಟ್ರಸ್ಟ್ ಅನ್ನು ಬೆಂಗಳೂರಿನ ಎಂ.ಆರ್.ಜಿ ಗ್ರೂಪ್ ಚೇರ್ಮನ್ ಕೆ.ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವ್ಯಕ್ತಿಯ ಯಶಸ್ಸಿನ ಹಿಂದೆ ಧರ್ಮಪತ್ನಿಯ ದೈವಭಕ್ತಿಯೂ ಪ್ರಮುಖ ಕಾರಣವಾ-ಗಿರುತ್ತದೆ. ಕುಟುಂಬದ ಶ್ರೇಯೋಭಿವೃದ್ಧಿಯಲ್ಲಿ ಮಹಿಳೆಯರ ಭಕ್ತಿ ಮತ್ತು ಧಾರ್ಮಿಕ ನಂಬಿಕೆ ಮಹತ್ವದ ಪಾತ್ರವಹಿಸುತ್ತದೆ ಎಂದು ಪ್ರಕಾಶ್ ಶೆಟ್ಟಿ ಹೇಳಿದರು.
ಕಾಪು ಹೊಸ ಮಾರಿಗುಡಿ ನವದುರ್ಗಾ ಲೇಖನ ಯಜ್ಞದಲ್ಲಿ ಬರೆಯುವುದು ಉತ್ತಮವಾದ ಅವಕಾಶ. ಇಂತಹ ಧಾರ್ಮಿಕ ಕಾರ್ಯಗಳು ಭಕ್ತರಲ್ಲಿ ಆಧ್ಯಾತ್ಮಿಕ ಭಾವನೆ ಹಾಗೂ ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಸಹಕಾರಿಯಾ-ಗುತ್ತವೆ ಎಂದರು.
ಡಿ.ಕೆ.ಶಿವಕುಮಾರ್‌ಗೆ ಮೊದಲ ಪ್ರಸಾದ: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಬಳಿಕ ಮೊದಲ ಪ್ರಸಾದವನ್ನು ಅಂದು ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ನೀಡಲಾಗಿತ್ತು. ಇದರಿಂದ ಸಂತೋಷವೂ ಇದೆ. ಕಾಪು ಮಾರಿಯಮ್ಮನ ಶಕ್ತಿ ಅಪಾರವಾಗಿದೆ.ಬಳಿಕ ಅವರು ಮುಖ್ಯಮಂತ್ರಿಯಾದರು. ಆದರೆ, ವಿರೋಧ ಪಕ್ಷದವರಾಗಿದ್ದ ಅವರು ಮುಖ್ಯಮಂತ್ರಿಯಾದದ್ದು ಸ್ವಲ್ಪ ದುಃಖದ ಸಂಗತಿಯೂ ಹೌದು. ಇದಕ್ಕೂ ಅಮ್ಮನ ಶಕ್ತಿಯೇ ಕಾರಣ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ಸಿದ್ದರಾಮಯ್ಯರನ್ನು ನೆನಪಿಸಿದ ಪ್ರಮೋದ್ ಮಧ್ವರಾಜ್’: ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದ ಘಟನೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ನೆನಪಿಸಿಕೊಂಡರು.
ಸಿದ್ದರಾಮಯ್ಯ ಅವರಿಗೆ ದೇವರ ಮೇಲೆ ಭಕ್ತಿ ಇದ್ದರೂ ಎಲ್ಲ ದೇವಸ್ಥಾನಗಳಿಗೂ ಹೋಗುತ್ತಿರಲಿಲ್ಲ. ಕೆಲವೇ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ತಮ್ಮ ಭಕ್ತಿಯನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿರಲಿಲ್ಲ. ಈ ಸಂದರ್ಭದಲ್ಲಿ ತಾವು ಸಿದ್ದರಾಮಯ್ಯ ಅವರಿಗೆ, ನೀವು ಮುಖ್ಯಮಂತ್ರಿಯಾಗಲು ನಿಮ್ಮ ಪತ್ನಿಯ ದೈವಭಕ್ತಿಯೂ ಒಂದು ಕಾರಣ ಎಂದು ಹೇಳಿದ್ದಾಗಿ ತಿಳಿಸಿದರು.





