ಸುಮನಸಾ ರಜತ ಸಂಭ್ರಮ: ‘ಪದ ಪಲ್ಲವಿ’ ಕನ್ನಡ ಕವನ ಸ್ಪರ್ಧೆಯ ಪೋಸ್ಟರ್ ಬಿಡುಗಡೆ

ಉಡುಪಿ: ರಜತ ಮಹೋತ್ಸವದ ಸಂಭ್ರಮದಲ್ಲಿರುವ ‘ಸುಮನಸಾ’ ಸಂಸ್ಥೆಯ ರಜತ ಸರಣಿ ಕಾರ್ಯಕ್ರಮಗಳ ಭಾಗವಾಗಿ ಆಯೋಜಿಸಲಾದ ‘ಪದ ಪಲ್ಲವಿ’ ಕನ್ನಡ ಕವನ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಸಮಾರಂಭವು ಸಂಸ್ಥೆಯ ಕಾರ್ಯಾಲಯದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಸಂಸ್ಥೆಯ ಆರಂಭದ ದಿನಗಳಿಂದಲೂ ಸಕ್ರಿಯ ಸದಸ್ಯೆಯಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಏಳಿಗೆಗೆ ಕೊಡುಗೆ ನೀಡಿದ ದಿವಂಗತ ಜ್ಯೋತಿ ಅವರ ಸವಿನೆನಪಿನಲ್ಲಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಜ್ಯೋತಿ ಅವರ ತಾಯಿ ಜಯಲಕ್ಷ್ಮಿ ಅವರು ಕವನ ಸ್ಪರ್ಧೆಯ ಅಧಿಕೃತ ಪೋಸ್ಟರ್ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಮನಸಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಮಾತನಾಡಿ, ‘ಸಂಸ್ಥೆಯ ಆರಂಭಿಕ ದಿನಗಳಲ್ಲಿ ಜ್ಯೋತಿ ಅವರ ಶ್ರಮ ಮತ್ತು ಬದ್ಧತೆ ಅನನ್ಯವಾದದ್ದು. ಅವರ ನೆನಪನ್ನು ಶಾಶ್ವತವಾಗಿಸಲು ಹಾಗೂ ಹೊಸ ತಲೆಮಾರಿನ ಕಾವ್ಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ‘ಪದ ಪಲ್ಲವಿ’ ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತ್ಯಾಸಕ್ತರು ಈ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ವಿನಂತಿಸಿಕೊಂಡರು.

ಸಂಸ್ಥೆಯ ಗೌರವಾಧ್ಯಕ್ಷ ಎಂ.ಎಸ್. ಭಟ್ ಮಾತನಾಡಿ, ‘ಕಲೆ ಮತ್ತು ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಸುಮನಸಾ ಕಳೆದ 25 ವರ್ಷಗಳಿಂದ ರಂಗಭೂಮಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಈ ರಜತ ಸಂಭ್ರಮದ ಕಾವ್ಯ ಸ್ಪರ್ಧೆಯು ಉದಯೋನ್ಮುಖ ಕವಿಗಳಿಗೆ ಉತ್ತಮ ವೇದಿಕೆಯಾಗಲಿದೆ’ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ಭಾಸ್ಕರ್ ಪಾಲನ್, ಕಾರ್ಯಕ್ರಮ ಸಂಯೋಜಕರಾದ ರಾಗಿಣಿ ಹರೀಶ್ ಹಾಗೂ ಶುಭಾ ಯೋಗೀಶ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಚಂದ್ರಕಾಂತ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!