ಪ್ರತಾಪ್ ಸಿಂಹರನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಉಡುಪಿಯಲ್ಲಿ ಪ್ರತಿಭಟನೆ
ಉಡುಪಿ, ಸೆ.21: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ದಲಿತರು, ಸಂವಿಧಾನ ಹಾಗೂ ಮಾನವೀಯ ಮೌಲ್ಯಗಳ ವಿರುದ್ಧವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಅವರನ್ನು ಕರ್ನಾಟಕದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಉಡುಪಿ ಅಂಬೇಡ್ಕರ್ ಯುವಸೇನೆ ವತಿಯಿಂದ ಸೋಮವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಪ್ರತಾಪ್ ಸಿಂಹ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಹಿರಿಯ ಚಿಂತಕ ನಾರಾಯಣ ಮಣೂರು ಮಾತನಾಡಿ, ನೀಲಿ ಶಾಲು ಬುದ್ಧ, ಬಸವ, ನಾರಾಯಣ ಗುರು, ಕುವೆಂಪು ಸೇರಿದಂತೆ ಮಹನೀಯರ ಚಿಂತನೆಗಳ ನೆಲೆಯಲ್ಲಿ ಸ್ವಾಭಿಮಾನದ ಸಂಕೇತವಾಗಿ ರೂಪುಗೊಂಡಿದೆ ಎಂದು ಹೇಳಿದರು.

ಭಾರತ ದೇಶವೆಂದರೆ ಕೇವಲ ಗಡಿ ಹಾಗೂ ಬಾವುಟವಲ್ಲ. ದೇಶದ ಕೋಟ್ಯಂತರ ಜನರ ಬದುಕು, ಸಮಾನತೆ ಮತ್ತು ಸಾಮಾಜಿಕ ಸಾಮರಸ್ಯವೂ ಭಾರತದ ಅಸ್ತಿತ್ವದ ಭಾಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನೀಲಿ ಶಾಲು ಭಯೋತ್ಪಾದನೆಯ ಸಂಕೇತವಲ್ಲ. ಅದು ಶತಮಾನಗಳಿಂದ ದಲಿತರು ಅನುಭವಿಸಿದ ಅಸ್ಪೃಶ್ಯತೆ, ಅವಮಾನ ಹಾಗೂ ಶೋಷಣೆಯ ವಿರುದ್ಧದ ಹೋರಾಟ ಮತ್ತು ಸಮಾನತೆ, ಸ್ವಾಭಿಮಾನದ ಸಂಕೇತವಾಗಿದೆ ಎಂದು ನಾರಾಯಣ ಮಣೂರು ಹೇಳಿದರು.
ದಲಿತ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ದಸಂಸ ಕುರಿತು ಪ್ರತಾಪ್ ಸಿಂಹ ಅವರು ಹೀನಾಯವಾಗಿ ಮಾತನಾಡಿರುವುದು ಖಂಡನೀಯ ಎಂದು ಹೇಳಿದರು. ನೀಲಿ ಶಾಲು ಸಮಾಜದಲ್ಲಿ ಸಮಾನತೆಯ ಸಂದೇಶ ಸಾರುತ್ತದೆ. ಯಾವುದೇ ರೀತಿಯ ದ್ವೇಷ ಅಥವಾ ಭಯೋತ್ಪಾದನೆಗೆ ಅದನ್ನು ಬಳಸಲಾಗುವುದಿಲ್ಲ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಹರೀಶ್ ಸಾಲ್ಯಾನ್, ಶಂಕರ್‌ದಾಸ್ ಚೇಂಡ್ಕಳ, ಶಿವಾನಂದ ಮೂಡಬೆಟ್ಟು, ಶೇಖರ ಹಾವಂಜೆ, ಯುವರಾಜ್, ಸಂಧ್ಯಾ ತಿಲಕ್‌ರಾಜ್, ಸಂಜೀವ ಬಳ್ಕೂರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುಖಂಡರಾದ ರಮೇಶ್ ಕಾಂಚನ್, ಜ್ಯೋತಿ ಹೆಬ್ಬಾರ್, ಉದ್ಯಾವರ ನಾಗೇಶ್ ಕುಮಾರ್, ಕುಶಲ್ ಶೆಟ್ಟಿ, ಸತೀಶ್ ಕೊಡವೂರು, ಮೀನಾಕ್ಷಿ ಬನ್ನಂಜೆ, ಮಮತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.





