ಸೆ.25: ಮೊಗವೀರ ಕುಲಗುರು ಕೀರ್ತಿಶೇಷ ಶ್ರೀಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ

ಉಚ್ಚಿಲ: ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮೊಗವೀರ ಸಮಾಜದ ಗುರು ಪರಂಪರೆಯ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿಯನ್ನು ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ಸ್ಥಾಪಿಸಬೇಕೆಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತೋರಿ ಬಂದ ಹಿನ್ನೆಲೆಯಲ್ಲಿ, ಮೊಗವೀರ ಸಮಾಜ ಬಾಂಧವರ ಸಂಕಲ್ಪದಂತೆ ಸುಮಾರು ರೂ.3 ಕೋಟಿ ವೆಚ್ಚದಲ್ಲಿ, 31 ಅಡಿ ಎತ್ತರ ಹಾಗೂ ಸುಮಾರು 14 ಸಾವಿರ ಕೆ.ಜಿ. ತೂಕದ ಕಂಚನ್ನು ಬಳಸಿ ಭವ್ಯ ಪುತ್ಥಳಿಯನ್ನು ನಿರ್ಮಿಸಲಾಗಿದೆ.

ಈ ಪುತ್ಥಳಿಯು ಮೊಗವೀರ ಸಮಾಜದ ಏಕತೆ, ಗುರುಭಕ್ತಿ ಹಾಗೂ ಗುರು ಪರಂಪರೆಯ ಭವ್ಯತೆಯನ್ನು ಮುಂದಿನ ಪೀಳಿಗೆಗೆ ಸಾರುವ ಮಹತ್ವದ ಪ್ರತೀಕವಾಗಲಿದೆ.

ಅತ್ಯಂತ ಶ್ರದ್ಧಾ-ಭಕ್ತಿಯಿಂದ ನಿರ್ಮಾಣಗೊಂಡಿರುವ ಮೊಗವೀರ ಕುಲಗುರುಗಳ ಕಂಚಿನ ಪುತ್ಥಳಿ ಅನಾವರಣ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ನಿರ್ಮಿಸಲ್ಪಟ್ಟಿರುವ ನೂತನ ವಿದ್ಯಾರ್ಥಿ ನಿಲಯದ ಉದ್ಘಾಟನೆ ಹಾಗೂ ಗುರಿಕಾರರಿಗೆ ಗೌರವಧನ ವಿತರಣಾ ಕಾರ್ಯಕ್ರಮವು ಇದೇ ಸೆ.25ರ ಬೆಳಗ್ಗೆ 10ಗಂಟೆಗೆ ಉಚ್ಚಿಲ ಮೊಗವೀರ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ನೂತನ ಪುತ್ಥಳಿಯನ್ನು ಅನಾವರಣಗೊಳಿಸಲಿದ್ದಾರೆ.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಅವರು ಗುರಿಕಾರರಿಗೆ ಗೌರವಧನ ವಿತರಿಸಲಿದ್ದು, ನಾಡೋಜ ಡಾ. ಜಿ. ಶಂಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದದ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ಯಶಪಾಲ್ ಎ. ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ, ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಹಾಗೂ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಉದ್ಯಮಿ ಆನಂದ ಸಿ. ಕುಂದರ್ ಕೋಟ, ಪ್ರಸಾದ್ ರಾಜ್ ಕಾಂಚನ್ ಭಾಗವಹಿಸಲಿದ್ದಾರೆಭಾಗವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಕರಾವಳಿ ಕರ್ನಾಟಕದ ಸರ್ವ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!