ಎಂಸಿಸಿ ಬ್ಯಾಂಕ್‌ಗೆ ₹10.07 ಕೋಟಿ ನಿವ್ವಳ ಲಾಭ; ಶೇ.10 ಡಿವಿಡೆಂಡ್

ಮಂಗಳೂರು: ಎಂಸಿಸಿ ಬ್ಯಾಂಕ್ ಲಿ. 2025–26ನೇ ಸಾಲಿನಲ್ಲಿ ₹10.07 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ಘೋಷಿಸಲಾಗಿದೆ.

ಸೆ.20ರಂದು ಮಂಗಳೂರಿನ ಕೊಡಿಯಾಲಬೈಲ್‌ನ ಲೊಯೊಲಾ ಆಡಿಟೋರಿಯಂನಲ್ಲಿ ನಡೆದ ಬ್ಯಾಂಕಿನ 108ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಈ ಮಾಹಿತಿ ನೀಡಿದರು.

ಬ್ಯಾಂಕಿನ ಠೇವಣಿಗಳು ₹872.88 ಕೋಟಿ, ಮುಂಗಡಗಳು ₹652.06 ಕೋಟಿ ಹಾಗೂ ಕಾರ್ಯನಿರತ ಬಂಡವಾಳ ₹1,008 ಕೋಟಿಗೆ ತಲುಪಿದೆ. ನಿವ್ವಳ ಎನ್‌ಪಿಎ ಶೇ.1.26 ಮತ್ತು CRAR ಶೇ.16.53ರಷ್ಟಿದ್ದು, ಒಟ್ಟು ವ್ಯವಹಾರ ₹1,525 ಕೋಟಿಯನ್ನು ಮೀರಿದೆ ಎಂದು ಅವರು ತಿಳಿಸಿದರು.

ಬ್ಯಾಂಕಿನ ವಿಸ್ತರಣಾ ಯೋಜನೆಯಡಿ 2026–27ರ ಅಂತ್ಯದೊಳಗೆ ಪಡೀಲ್‌ನಲ್ಲಿ 24ನೇ ಹಾಗೂ ಕದ್ರಿ ಅಥವಾ ಬಿಜೈನಲ್ಲಿ 25ನೇ ಶಾಖೆ ಆರಂಭಿಸುವ ಗುರಿ ಹೊಂದಲಾಗಿದೆ. ಮುಂದಿನ ವಾರ್ಷಿಕ ಮಹಾಸಭೆಯೊಳಗೆ 25 ಶಾಖೆಗಳು ಮತ್ತು 20 ಎಟಿಎಂಗಳನ್ನು ಹೊಂದುವ ಗುರಿಯನ್ನೂ ಪ್ರಕಟಿಸಲಾಯಿತು.

ಹೊಸ ಲೋಗೋವನ್ನು 2027ರ ಜನವರಿಯಲ್ಲಿ ಪರಿಚಯಿಸಲಾಗುವುದು. ಎಟಿಎಂ, ಕ್ಯಾಶ್ ಡೆಪಾಸಿಟ್ ಮೆಷಿನ್ ಹಾಗೂ ಯುಪಿಐ ಸೇವೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಸಭೆಯಲ್ಲಿ 2025–26ನೇ ಸಾಲಿನ ಲೆಕ್ಕಪರಿಶೋಧಿತ ಹಣಕಾಸು ಹೇಳಿಕೆಗಳು, ವರದಿಗಳು ಹಾಗೂ 2026–27ನೇ ಸಾಲಿನ ಬಜೆಟ್ ಮತ್ತು ಕಾರ್ಯಕ್ರಮಗಳಿಗೆ ಸದಸ್ಯರ ಅನುಮೋದನೆ ಪಡೆಯಲಾಯಿತು. ಡಾ. ಜೆರಾಲ್ಡ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು. ನೃತ್ಯ ಕಲಾವಿದೆ ರೆಮೋನಾ ಪೆರೇರಾ ಅವರ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

Leave a Reply

Your email address will not be published. Required fields are marked *

error: Content is protected !!