ಪ್ರಧಾನಿ ಮೋದಿಯಿಂದ ಹಿಂದೂ ಧರ್ಮದ ಪುನರುತ್ಥಾನ ಆಗುತ್ತಿದೆ-ಗುಜ್ಜಾಡಿ ರಾಮದಾಸ್ ನಾಯಕ್
ಉಡುಪಿ: ಸಾಮಾಜಿಕ ಜಾಲತಾಣಗಳಿಂದ ಒಳಿತಿನಂತೆ ಕೆಡಕೂ ಹೆಚ್ಚತೊಡಗಿದೆ. ಸಮುದಾಯಗಳ ನಡುವಿನ ಬಾಂಧವ್ಯವೂ ಕೆಡುತ್ತಲಿದೆ. ಹೀಗಾಗಿ ಎಲ್ಲರೂ ಜಾಗೃತರಾಗಿರಬೇಕಿದೆ. ಭಾರತದಲ್ಲಿ ಜನಿಸಿರುವ ನಾವೆಲ್ಲರೂ ಅದೃಷ್ಟವಂತರು. ದೇವತುಲ್ಯರಾದ ಪ್ರಧಾನಿ ನರೇಂದ್ರ ಮೋದಿ ನಮಗೆ ಲಭಿಸಿದ್ದಾರೆ. ಅವರಿಂದ ಹಿಂದೂ ಧರ್ಮದ ಪುನರುತ್ಥಾನ ಆಗುತ್ತಿದ್ದು, ಭಾರತ ವಿಶ್ವಗುರು ಆಗಲಿದೆ ಎಂದು ಸ್ವರ್ಣ ಜುವೆಲ್ಲರ್ಸ್ನ ನಿರ್ದೇಶಕ ಗುಜ್ಜಾಡಿ ರಾಮದಾಸ್ ನಾಯಕ್ ಅಭಿಪ್ರಾಯಪಟ್ಟರು.
ಉಡುಪಿಯ ಕಡಿಯಾಳಿ ಮಹಿಷಮರ್ಧಿನಿ ದೇಗುಲದ ಹೊರಾಂಗಣದಲ್ಲಿ ಗುಜ್ಜಾಡಿ ನರಸಿಂಹ ನಾಯಕ್ ವೇದಿಕೆಯಲ್ಲಿ ಉಡುಪಿ ಗಣೇಶೋತ್ಸವ ಸಮಿತಿಯ 60ನೇ ವರ್ಷದ ಹಾಗೂ ವಜ್ರ ಮಹೋತ್ಸವದ ನಿಮಿತ್ತ ಶುಕ್ರವಾರ (ಸೆ.18) ಸಂಜೆ ಆಯೋಜಿಸಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಸಮಿತಿಯ ಗೌರವ ಸಲಹೆಗಾರ ಹಾಗೂ ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಹಿರಿಯರು 60 ವರ್ಷದ ಹಿಂದೆ ಗಣೇಶೋತ್ಸವ ಆರಂಭಿಸಿದಾಗ ಇದ್ದ ಭಕ್ತಿಭಾವ ಇಂದಿಗೂ ಮುಂದುವರಿದಿರುವುದು ವಿಶೇಷ. ಗಣೇಶೋತ್ಸವವೆಂದರೆ ಸಂಸ್ಕಾರ, ಸಂಸ್ಕೃತಿಯ ಪ್ರತೀಕ ಎಂದರು.
ಮತ್ಸ್ಯೋದ್ಯಮಿ ಸಾಧು ಸಾಲಿಯಾನ್ ಮಲ್ಪೆ, ಉದ್ಯಮಿ ಭಾಸ್ಕರ್ ಶೇರಿಗಾರ್, ವಜ್ರ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಮಂಜುನಾಥ್ ಹೆಬ್ಬಾರ್ ಉಪಸ್ಥಿತರಿದ್ದರು.
ಕುಣಿತ ಭಜನಾ ಸ್ಪರ್ಧೆ: ಕೋಡಿಕಲ್ ಪ್ರಥಮ

ವಜ್ರ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಶ್ರೀರಾಮ ಮುಖ್ಯಪ್ರಾಣ ಕುಣಿತ ಭಜನಾ ತಂಡ ಕೋಡಿಕಲ್ ಪ್ರಥಮ ಸ್ಥಾನ ಗಳಿಸಿತು. ಶ್ರೀ ಬಾಲವಿಕಾಸ ಭಜನಾ ಮಂಡಳಿ ಹೊಸಬೆಟ್ಟು ಸುರತ್ಕಲ್ ತಂಡ ದ್ವಿತೀಯ, ಶ್ರೀದೇವಿ ಭಜನಾ ಮಂಡಳಿ ನೀರೇಬೈಲೂರು ಕಾರ್ಕಳ ತಂಡ ತೃತೀಯ ಸ್ಥಾನ ಗಳಿಸಿತು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಖ್ಯಾತಿ ಭಟ್ ವಂದೇ ಮಾತರಂ ಗೀತೆ ಹಾಡಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ.ವಸಂತ್ ಭಟ್ ಸ್ವಾಗತಿಸಿದರು. ವಜ್ರ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಮತ್ತು ಸರಿತಾ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಭರತಾಂಜಲಿ ಕಡಿಯಾಳಿ ತಂಡದಿಂದ ಲಘು ಸಂಗೀತ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ತೆಂಕು ಮತ್ತು ಬಡಗುತಿಟ್ಟಿನ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡಿತು. ರಾತ್ರಿ 8:30ಕ್ಕೆ ಗಣಪನ ಸನ್ನಿಧಿಯಲ್ಲಿ ರಂಗಪೂಜೆ ನೆರವೇರಿತು.
ಇಂದು ಮಹಾಗಣಪತಿ ಸನ್ನಿಧಾನದಲ್ಲಿ ವಿಶೇಷ ಗಣಹೋಮ ಮಧ್ಯಾಹ್ನ 12.30 ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ
ಸಂಜೆ 5.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ






