ತುಳು ಭಾಷೆಗೆ ಅಧಿಕೃತ ಮಾನ್ಯತೆ: ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಧನ್ಯವಾದ- ಸಜ್ಜನ್ ಶೆಟ್ಟಿ
ಮಂಗಳೂರು, ಸೆ.19: ಕರ್ನಾಟಕದ ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ತುಳು ಭಾಷೆಗೆ ರಾಜ್ಯದ 2ನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡಲು ಸಚಿವ ಸಂಪುಟ ತೀರ್ಮಾನಿಸಿರುವುದು ತುಳುವರ ಪಾಲಿಗೆ ಸಂತಸದ ಹಾಗೂ ಮಹತ್ವದ ಬೆಳವಣಿಗೆಯಾಗಿದೆ.
ತುಳು ಭಾಷೆಯ ಐತಿಹಾಸಿಕತೆ, ಶ್ರೀಮಂತ ಸಾಹಿತ್ಯ ಪರಂಪರೆ ಹಾಗೂ ಕರಾವಳಿಯ ವಿಶಿಷ್ಟ ಸಂಸ್ಕೃತಿಯನ್ನು ಗೌರವಿಸಿ ಈ ಮಹತ್ವದ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು.
ತುಳು ಕೇವಲ ಒಂದು ಭಾಷೆಯಲ್ಲ; ಅದು ತುಳುನಾಡಿನ ಜನರ ಸಂಸ್ಕೃತಿ, ಪರಂಪರೆ, ಆಚರಣೆ, ಕಲೆ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ. ಹಲವು ವರ್ಷಗಳಿಂದ ತುಳುವರು ತಮ್ಮ ಭಾಷೆಗೆ ಅಧಿಕೃತ ಮಾನ್ಯತೆ ದೊರೆಯಬೇಕೆಂದು ಒತ್ತಾಯಿಸುತ್ತಾ ಬಂದಿದ್ದರು. ಇದೀಗ ಸರ್ಕಾರದ ಈ ನಿರ್ಧಾರದಿಂದ ಆ ಬಹುಕಾಲದ ಆಶಯಕ್ಕೆ ಮಹತ್ವದ ಮಾನ್ಯತೆ ದೊರೆತಂತಾಗಿದೆ.
ತುಳು ಭಾಷೆಯ ಅಭಿವೃದ್ಧಿಗೆ, ಅದರ ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಹಾಗೂ ಮುಂದಿನ ಪೀಳಿಗೆಗೆ ತುಳುವಿನ ಶ್ರೀಮಂತ ಪರಂಪರೆಯನ್ನು ತಲುಪಿಸಲು ಈ ನಿರ್ಧಾರ ಮತ್ತಷ್ಟು ಪ್ರೋತ್ಸಾಹ ನೀಡಲಿದೆ ಎಂಬ ಆಶಯ ನಮ್ಮದು.
ತುಳುವಿಗೆ ಗೌರವ ನೀಡಿದ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಕರ್ನಾಟಕ ಸರ್ಕಾರಕ್ಕೆ ಸಮಸ್ತ ತುಳುವರ ಪರವಾಗಿ ಹೃದಯಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳು- ಸಜ್ಜನ್ ಶೆಟ್ಟಿ ಅಧ್ಯಕ್ಷರು, ಉಡುಪಿ ಬ್ಲಾಕ್ ಯುವ ಕಾಂಗ್ರೆಸ್





