ಸಾಂಪ್ರದಾಯಿಕ ಕಂಬಳಕ್ಕೆ ವಿಶೇಷ ಅನುದಾನ ನೀಡಿ: ಸಾಂಪ್ರದಾಯಿಕ ಕಂಬಳ ಸಮಿತಿ ಆಗ್ರಹ
ಕರಾವಳಿಯ ಜನಪದ, ಕ್ರೀಡೆ ಹಾಗೂ ಧಾರ್ಮಿಕ ಪರಂಪರೆಯ ಪ್ರತೀಕವಾಗಿರುವ ಕಂಬಳ ಸಂರಕ್ಷಣೆಗೆ ಸರ್ಕಾರ ಮುಂದಾಗಲಿ
ಉಡುಪಿ: ಕರಾವಳಿಯ ವಿಶಿಷ್ಟ ಜನಪದ ಆಚರಣೆ ಹಾಗೂ ಕ್ರೀಡೆಯಾಗಿರುವ ಸಾಂಪ್ರದಾಯಿಕ ಕಂಬಳಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕಂಬಳಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಹಾಗೂ ಉಡುಪಿ ಜಿಲ್ಲೆಯಲ್ಲಿ 60ಕ್ಕೂ ಹೆಚ್ಚು ಸಾಂಪ್ರದಾಯಿಕ ಕಂಬಳಗಳು ನಡೆಯುತ್ತವೆ. ಇದು ಕೇವಲ ಕ್ರೀಡೆಯಾಗಿರದೆ ಕರಾವಳಿಯ ಜನಪದ ಹಾಗೂ ಧಾರ್ಮಿಕ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಆಚರಣೆಯಾಗಿದೆ ಎಂದರು.
ಪ್ರತಿ ಕಂಬಳದ ಬಳಿಕ ಕೋಲ, ರಂಗಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಸಾಂಪ್ರದಾಯಿಕ ಕಂಬಳಕ್ಕೆ ಸರ್ಕಾರದಿಂದ ಅನುದಾನ ನೀಡುವಂತೆ ಸಮಿತಿ ಹಲವು ವರ್ಷಗಳಿಂದ ಹೋರಾಟ ನಡೆಸಿದ್ದರೂ ಈವರೆಗೆ ಫಲ ದೊರೆತಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆ.18ರಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಕರಾವಳಿಯ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ಕರಾವಳಿಯ ಜನಪದ, ಕ್ರೀಡೆ ಮತ್ತು ಧಾರ್ಮಿಕ ನಂಟು ಹೊಂದಿರುವ ಸಾಂಪ್ರದಾಯಿಕ ಕಂಬಳದ ಸಂರಕ್ಷಣೆ ಹಾಗೂ ಉತ್ತೇಜನಕ್ಕೆ ವಿಶೇಷ ಅನುದಾನ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಸುಧಾಕರ ಹೆಗ್ಡೆ ಹಾಗೂ ಅಭಿಜಿತ್ ಪಾಂಡೇಶ್ವರ ಉಪಸ್ಥಿತರಿದ್ದರು.





