ಅ.15ರಿಂದ ರೂ. 2,000 ಕ್ಕಿಂತ ಹೆಚ್ಚಿನ UPI ವ್ಯಾಪಾರಿ ಪಾವತಿಗಳಿಗೆ ಶೇ.0.4ರಷ್ಟು ಶುಲ್ಕ ಜಾರಿ
ಹೊಸದಿಲ್ಲಿ: ರೂ. 2,000ಕ್ಕಿಂತ ಹೆಚ್ಚಿನ ಮೊತ್ತದ ವ್ಯಕ್ತಿಯಿಂದ ವ್ಯಾಪಾರಿಗೆ (P2M) ನಡೆಯುವ UPI ಪಾವತಿಗಳಿಗೆ ಶೇ. 0.4ರಷ್ಟು ಶುಲ್ಕ ವಿಧಿಸಲಾಗುವುದು ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ತಿಳಿಸಿದೆ.
75,000 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳಿಗೆ ಶುಲ್ಕವನ್ನು ಪ್ರತಿ ವಹಿವಾಟಿಗೆ ಗರಿಷ್ಠ 300ಕ್ಕೆ ಮಿತಿಗೊಳಿಸಲಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ವಹಿವಾಟುಗಳು ಎಂದಿನಂತೆ ಉಚಿತವಾಗಿ ಮುಂದುವರಿಯಲಿವೆ ಎಂದು ತಿಳಿಸಿದೆ.
MDR ಶುಲ್ಕವು 2026ರ ಅಕ್ಟೋಬರ್ 15ರಿಂದ ಜಾರಿಗೆ ಬರಲಿದೆ.
ರೈಲ್ವೆ, ದೂರಸಂಪರ್ಕ ಮತ್ತು ಇಂಧನದಂತಹ ಅಗತ್ಯ ಸೇವಾ ಕ್ಷೇತ್ರಗಳಿಗೆ ಪ್ರತಿ ವಹಿವಾಟಿಗೆ 5ರಷ್ಟು ನಿಗದಿತ ಶುಲ್ಕ ವಿಧಿಸಲಾಗುತ್ತದೆ. ಅದೇ ವೇಳೆ, ಬಂಡವಾಳ ಮಾರುಕಟ್ಟೆ ವಹಿವಾಟುಗಳಿಗೆ ಶೇ. 0.02ರಷ್ಟು ಕಡಿಮೆ ದರವನ್ನು ನಿಗದಿಪಡಿಸಲಾಗಿದೆ.
UPI QR ಕೋಡ್‌ಗಳ ಮೂಲಕ ತಿಂಗಳಿಗೆ 1 ಲಕ್ಷದವರೆಗೆ ಆದಾಯ ಗಳಿಸುವ ಸಣ್ಣ ವ್ಯಾಪಾರಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.





