ವಿಶ್ವದ ಅಗ್ರ ‘ಹಸಿರು ಆಸ್ಪತ್ರೆ’ ಗಳ ಪಟ್ಟಿಯಲ್ಲಿ ಉಡುಪಿಯ ಸಿಎಸ್‌ಐ ಲೊಂಬಾರ್ಡ್ (ಮಿಷನ್) ಆಸ್ಪತ್ರೆ

ನ್ಯೂಸ್‌ವೀಕ್‌ 2026ರ ಜಾಗತಿಕ ಶ್ರೇಯಾಂಕದಲ್ಲಿ ಸ್ಥಾನ; ಉಡುಪಿಗೆ ಮತ್ತೊಂದು ಹೆಮ್ಮೆ

ಉಡುಪಿ: ಆರೋಗ್ಯ ಸೇವೆಯ ಜೊತೆಗೆ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಗೆ ಮತ್ತೊಂದು ಜಾಗತಿಕ ಮನ್ನಣೆ ದೊರೆತಿದೆ.

ನ್ಯೂಸ್‌ವೀಕ್‌ 2026ರ ‘World’s Greenest Hospitals’ ಜಾಗತಿಕ ಶ್ರೇಯಾಂಕದಲ್ಲಿ ಸಿಎಸ್‌ಐ ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ ಸ್ಥಾನ ಪಡೆದಿದೆ. ಜಾಗತಿಕ ಮಟ್ಟದಲ್ಲಿ ಪರಿಸರ ಸ್ನೇಹಿ ಮತ್ತು ಸುಸ್ಥಿರ ಆರೋಗ್ಯ ಸಂಸ್ಥೆಗಳನ್ನು ಗುರುತಿಸುವ ಈ ಪಟ್ಟಿಯಲ್ಲಿ ಆಸ್ಪತ್ರೆಯ ಹೆಸರು ಕಾಣಿಸಿಕೊಂಡಿರುವುದು ಉಡುಪಿ ಜಿಲ್ಲೆಯ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.

ಆಸ್ಪತ್ರೆಯ ಈ ಸಾಧನೆಯು ಆರೋಗ್ಯ ಸೇವೆಯ ಗುಣಮಟ್ಟದ ಜೊತೆಗೆ ಪರಿಸರದ ಮೇಲಿನ ಕಾಳಜಿ, ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಸುಸ್ಥಿರ ಆರೋಗ್ಯ ವ್ಯವಸ್ಥೆಯತ್ತ ಆಸ್ಪತ್ರೆ ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ವಿಶ್ವದ ವಿವಿಧ ಭಾಗಗಳ ಆಸ್ಪತ್ರೆಗಳನ್ನು ಪರಿಸರ ಸ್ನೇಹಿ ಕಾರ್ಯವೈಖರಿ ಹಾಗೂ ಸುಸ್ಥಿರತೆಯ ಮಾನದಂಡಗಳ ಆಧಾರದ ಮೇಲೆ ಗುರುತಿಸಲಾಗುತ್ತಿದ್ದು, ಸಿಎಸ್‌ಐ ಲೊಂಬಾರ್ಡ್ ಮಿಷನ್ ಆಸ್ಪತ್ರೆ ಏಷ್ಯಾ-ಪೆಸಿಫಿಕ್ ವಿಭಾಗದ ‘World’s Greenest Hospitals 2026’ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಉಡುಪಿಯ ಐತಿಹಾಸಿಕ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಸಿಎಸ್‌ಐ ಲೊಂಬಾರ್ಡ್ ಮಿಷನ್ ಆಸ್ಪತ್ರೆ, ದಶಕಗಳಿಂದ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದು, ಇದೀಗ ಜಾಗತಿಕ ಮಟ್ಟದ ಹಸಿರು ಆಸ್ಪತ್ರೆಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರು ವುದು ಆಸ್ಪತ್ರೆಯ ಸೇವಾ ಪರಂಪರೆಗೆ ಮತ್ತೊಂದು ಗರಿಮೆ ತಂದಿದೆ.

ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮನ್ವಯಗೊಳಿಸುವ ಮೂಲಕ ಸುಸ್ಥಿರ ಆರೋಗ್ಯ ಸೇವೆಯ ಮಾದರಿಯಾಗಿ ಆಸ್ಪತ್ರೆ ಗುರುತಿಸಿಕೊಂಡಿರುವುದು ಉಡುಪಿ ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.

ಉಡುಪಿ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಮತ್ತೊಂದು ಜಾಗತಿಕ ಗೌರವ ಲಭಿಸಿರುವುದಕ್ಕೆ ಸಾರ್ವಜನಿಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!