ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬಕ್ಕೆ ಮಂಗಳೂರಿನಲ್ಲಿ ಅದ್ದೂರಿಯ ಚಾಲನೆ
ಜಿಲ್ಲೆಗಳ ಅಭಿವೃದ್ದಿಗೆ ಎಲ್ಲರೂ ಒಂದಾಗಬೇಕು – ಸಚಿವ ಕೆ. ಜೆ. ಜಾರ್ಜ್
ಮಂಗಳೂರು: ಸಮಾಜ ಮುಖಿ ಚಿಂತನೆಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಇತರರಿಗೆ ಮಾದರಿಯಾಗಿದೆ. ಕರಾವಳಿಯಲ್ಲಿ ತನ್ನದೇ ಆದ ಹೆಗ್ಗುರುತನ್ನ ಮೂಡಿಸಿರುವ ಸಮಿತಿ ಯ ಬೆಳ್ಳಿ ಹಬ್ಬಕ್ಕೆ ಅಭಿನಂದನೆಗಳು. ಕರಾವಳಿ ಜಿಲ್ಲೆಗಳಲ್ಲಿ ಅಧಿಕೃತವಾಗಿ ಪವರ್ ಕಟ್ಟ್ ಆಗಿದ್ದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಂದು ತಿಂಗಳು ಮಾತ್ರ. ಇತರ ಸಂದರ್ಭದಲ್ಲಿ ಇನ್ನಿತರ ಕಾರಣದಿಂದಾಗಿ ಅನಧಿಕೃತವಾಗಿ ವಿದ್ಯುತ್ ಸಮಸ್ಯೆಯಾಗಿರಬಹುದು. ನಿಜವಾಗಿಯೂ ಜಿಲ್ಲೆಗಳಲ್ಲಿ ವಿದ್ಯುತ್ ಸಮಸ್ಯೆ ಇಲ್ಲದಂತೆ ಮಾಡುವ ಪ್ರಯತ್ನ ನಮ್ಮದು. ಇಂತಹ ಸಂಘಟನೆಯೊಂದಿಗೆ ಪ್ರತಿಯೊಬ್ಬರು ಕೈಜೋಡಿಸಿದಾಗ ಕರಾವಳಿಯ ಸಮಗ್ರ ಅಭಿವೃದ್ದಿ ಸಾಧ್ಯ ಎಂದು ಕರ್ನಾಟಕ ಸರಕಾರದ ಇಂಧನ ಹಾಗೂ ಪ್ರವಾಸೋಧ್ಯಮ ಸಚಿವ ಕೆ. ಜೆ. ಜಾರ್ಜ್ ನುಡಿದರು.

ಸೆ. 6ರಂದು ಮಂಗಳೂರಿನ ಪುರಭವನದಲ್ಲಿ ತೋನ್ಸೆ ಜಯಕೃಷ್ಣ ಶೆಟ್ಟಿಯವರ ನೇತ್ರತ್ವದಲ್ಲಿ ನಿತ್ಯಾನಂದ ಡಿ ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ಜರಗಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬೆಳ್ಳಿ ಹಬ್ಬ ಸಮಾರಂಭದ ಸಭಾ ಕಾರ್ಯಕ್ರಮಕ್ಕೆ ಚಾಲನೆ ದೀಪ ಬೆಳಗಿಸಿ ಚಾಲನೆ ನೀಡಿದ ಅವರು ಕರಾವಳಿ ಪ್ರದೇಶಕ್ಕೆ ಶ್ರೀನಿವಾಸ ಮಲ್ಯ ಹಾಗೂ ಜಾರ್ಜ್ ಫೆರ್ನಾಂಡೀಸ್ ರವರ ಕೊಡುಗೆಯನ್ನು ಸ್ಮರಿಸಿದರು. ಇಂತಹ ವ್ಯಕ್ತಿಗಳು ಮುಂದೆ ಬಂದಲ್ಲಿ ಕರಾವಳಿ ಪ್ರದೇಶಗಳು ಶ್ರೀಘ್ರದಲ್ಲೇ ಮತ್ತಷ್ಟು ಅಭಿವೃದ್ದಿ ಹೊಂದುದರಲ್ಲಿ ಸಂದೇಹವಿಲ್ಲ ಎಂದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಕರಾವಳಿಯ ಅಭಿವೃದ್ದಿಯ ಬಗ್ಗೆ ಕೈಗೊಂಡ ಯೋಜನೆಯ ಬಗ್ಗೆ ನಾನು ಮತ್ತು ಆರೋಗ್ಯ ಸಚಿವ ಯು ಟಿ ಖಾದರ್ ಅವರು ಮುಖ್ಯ ಮಂತ್ರಿಗಳ ಗಮನಕ್ಕೆ ತರಲಿದ್ದು ಅವರು ಅದಕ್ಕೆ ಸ್ಪಂದಿಸುವ ಭರವಸೆಯಿದೆ ಎಂದು ನುಡಿದರು.

ರಾಜ್ಯದ ಹಾಗೂ ಜಿಲ್ಲೆಯ ಜನತೆಯ ಪರವಾಗಿ ಬೆಳ್ಳಿ ಹಬ್ಬ ಆಚರಿಸುತ್ತಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ಅಭಿನಂದನೆ ಸಲ್ಲಿಸಿದ ಆರೋಗ್ಯ ಸಚಿವ ಯು ಟಿ ಖಾದರ್ ಅವರು ನಾನು ವಿದ್ಯಾರ್ಥಿ ಜೀವನದಲ್ಲೇ ಸಮಿತಿಯ ಬಗ್ಗೆ ಅರಿತಿದ್ದು ಆಗ ನನಗೆ ಇದರ ಮಹತ್ವ ಅರಿವಾಗಲಿಲ್ಲ. ಯುವ ಜನಾಂಗಕ್ಕೆ ಸಮಿತಿಯ ಹೋರಾಟದ ಉದ್ದೇಶದ ಅರಿವು ಆಗಬೇಕಾಗಿದೆ. ಆಗ ಮಾತ್ರ ಯಾವುದೇ ಅಡ್ಡಿಯಿಲ್ಲದೆ ದೊಡ್ಡ ದೊಡ್ಡ ಕಂಪೆನಿಗಳು ಸ್ಥಾಪನೆಯಾಗಿ ಯುವ ಜನಾಂಗಕ್ಕೆ ಉದ್ಯೋಗ ದೊರೆಯುವುದು ಮಾತ್ರವಲ್ಲದೆ ಆ ಪ್ರದೇಶದ ಅಭಿವೃದ್ದಿಯೂ ಆಗುತ್ತದೆ. ಒಂದು ಯೋಜನೆಯಿಂದ ಆ ಪರಿಸರದ ಎಲ್ಲರಿಗೂ ಲಾಭದಾಯಕವಾಗುತ್ತದೆ. ಜನರ ಸಹಕಾರವಿದ್ದಲ್ಲಿ ಸಚಿವ ಕೆ ಜೆ ಜಾರ್ಜ್ ಅವರ ಮುಖಾಂತರ ಸಮಿತಿಯ ಯೋಜನೆಗೆ ಸಹಕರಿಸುವೆನು. ಮಾಧ್ಯಮಗಳು ಸಕಾರಾತ್ಮಕ ವರದಿಗೆ ಮಹತ್ವ ನೀಡಬೇಕು. ಶೇಖಡಾ ಹತ್ತರಷ್ಟು ನಕಾರಾತ್ಮಕ ಸುದ್ದಿಯನ್ನು ಹರಡಿಸಿದಲ್ಲಿ ಉಳಿದ ಶೇಖಡಾ ತೊಂಬತ್ತು ಸಕಾರಾತ್ಮಕ ಕಾರ್ಯಕ್ಕೆ ಹಾನಿಯಾಗುತ್ತದೆ ಎಂದರು. ಭವಿಷ್ಯದಲ್ಲಿ ಉತ್ತಮ ಕರಾವಳಿಯನ್ನು ಕಟ್ಟಬೇಕಾದ ಉತ್ತಮ ಚಿಂತನೆ ಇರುವ ತೋನ್ಸೆ ಜಯಕೃಷ್ಣ ಶೆಟ್ಟಿಯವರ ನೇತ್ರತ್ವದ ತಂಡದ ಕಾರ್ಯ ಸ್ಲಾಘನೀಯ ಎಂದರು.

ದಿಕ್ಸೂಚಿ ಬಾಷಣ ಮಾಡಿದ ಎನ್‌ಆರ್‌ಐ ಡಿಸ್ಟಿಂಗ್ವಿಶ್ಡ್ ಫೆಲೋ ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ಸ್ (ಇಂಡಿಯಾ–ಗ್ಲೋಬಲ್)ನ ಡಾ. ರೊನಾಲ್ಡ್ ಕೊಲಾಸೋ ನಮ್ಮ ಜಿಲ್ಲೆಗಳಲ್ಲಿ ಎಲ್ಲಾ ವ್ಯವಸ್ಥೆ ಯಿದ್ದು ಅಭಿವೃದ್ದಿಯು ಸುಲಭ. ರಾಜಕೀಯ ಬದಿಗೊತ್ತಿ ಅಭಿವೃದ್ದಿಯತ್ತ ಗಮನ ನೀಡಬೇಕಾಗಿದೆ. ಸರಕಾರವು ತಜ್ನರ ಸಮಿತಿಯನ್ನು ಒಳಗೊಂಡ ಟಾಸ್ಕ್ ಪೋರ್ಸನ್ನು ರಚಿಸಬೇಕು. ಅಭಿವೃದ್ದಿಯೇ ಆಧ್ಯತೆಯಾದಲ್ಲಿ ಇದು ಸಾದ್ಯ, ನಾನು ಕೂಡಾ ಇದಕ್ಕೆ ಪ್ರೊತ್ಸಾಹಿಸುವೆನು ಎಂದರು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಮಾತನಾಡುತ್ತಾ ಸಮಗ್ರ ಅಭಿವೃದ್ದಿಗೆ ಪೂರಕವಾದ ಸೌಲಭ್ಯವಿರುವ ಕರಾವಳಿ ಪ್ರದೇಶದಲ್ಲಿ ಮೊದಲು ಕೋಮುವಾದ ನಿರ್ಮೂಲನೆಯಾಗ ಬೇಕು. ಇದಕ್ಕೆ ಜನಸಾಮಾನ್ಯರು ಸರಕಾರದೊಂದಿಗೆ ಸಹಕರಿಸಬೇಕು. ಕಡಲ್ಕೊರೆತೆಕ್ಕೆ ಮುಂಬಯಿಯ ಮೆರಿನ್ ಡ್ರೈವ್ ನಂತಹ ಶಾಶ್ವತ ಪರಿಹಾರವಾಗಬೇಕು. ಇಲ್ಲಿ ಎಂದೂ ಲೋಡ್ ಶೆಡ್ಡಿಂಗ್ ಆಗದಿರಲಿ. ಕರಾವಳಿಯಲ್ಲಿ ದಿನಕ್ಕೆ 24 ತಾಸು ವಿದ್ಯುತ್ ಪೂರೈಕೆಯಾರಲಿ ಎಂದು ಮಂತ್ರಿಗಳನ್ನು ಒತ್ತಾಯಿಸಿದರು. ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಅವರು ಅಧ್ಯಕ್ಷೀಯ ಬಾಷಣ ಮಾಡಿ ಜಿಲ್ಲೆಯ ಅಭಿವೃದ್ದಿಯ ಅಗತ್ಯದ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶಾಸಕ ವೇದವ್ಯಾಸ ಕಾಮತ್, ಕರಾವಳಿ ಡೆವೆಲಪ್ಮೆಂಟ್ ಬೋರ್ಡ್ ನ ಕಾರ್ಯಾಧ್ಯಕ್ಷ ಎಂ.ಎ.ಗಫೂರ್, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ್ ಯು ದೇವಾಡಿಗ, ದುಬೈನ ಕೈಗಾರಿಕೋದ್ಯಮಿ ಡಾ.ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಸಮಿತಿಯ ರಾಜ್ಯ ಸಂಚಾಲಕ ಕೆ.ಪಿ.ಜಗದೀಶ್ ಅಧಿಕಾರಿ, ನಿಧಿಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಡಾ. ಆರ್.ಕೆ.ಶೆಟ್ಟಿ, ಗೌರವ ಕೋಶಾಧಿಕಾರಿ ಸದಾನಂದ ಎನ್. ಆಚಾರ್ಯ, ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಎಂ.ಶೆಟ್ಟಿ ಸ್ವಾಗತಿಸಿದರು. ಸಮಿತಿಯ ವಕ್ತಾರ ದಯಾಸಾಗರ ಚೌಟ ಸಭಾಕಾರ್ಯಕ್ರಮವನ್ನು ನಿರ್ವಹಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ವಂದನಾರ್ಪಣೆ ಮಾಡಿದರು. ಅನುಶ್ರೀಯ ಎಚ್ ಶೆಟ್ಟಿ ಪ್ರಾರ್ಥನೆ ಮಾಡಿದರು.
ಮನೋರಂಜನೆಯ ಅಂಗವಾಗಿ ನಾಟ್ಯರಂಗ ಪುತ್ತೂರು ಇವರಿಂದ ಬರತನಾಟ್ಯ ಕಲಾವಿದೆ ಮಂಜುಳಾ ಸುಭ್ರಮಣ್ಯಂ ಇವರ ತಂಡದಿಂದ ನಾಟ್ಯಲಹರಿ ಕಾರ್ಯಕ್ರಮ ನಡೆಯಿತು.
ಸಮಿತಿಯ ಇತರ ಪದಾಧಿಕಾರಿಗಳಾದ ಧನಂಜಯ ಶೆಟ್ಟಿ, ಸಿಎ ಐ ಆರ್ ಶೆಟ್ಟಿ, ವಿವೇಕ್ ರೈ, ವಿರಾರ್ ಶಂಕರ್ ಶೆಟ್ಟಿ, ನ್ಯಾ, ಆರ್ ಎಂ ಭಂಡಾರಿ, ಗಿರೀಶ್ ಸಾಲ್ಯಾನ್, ತೋನ್ಸೆ ಅಶೋಕ್ ಶೆಟ್ಟಿ, ವಿಲ್ಸನ್ ಫೆರ್ನಾಂಡೀಸ್, ಮಂಜುನಾಥ ಹೆಗ್ಡೆ, ಅರುಣ್ ಪ್ರಕಾಶ್ ಶೆಟ್ಟಿ, ಸುಂದರ್ ಆಚಾರ್ಯ ಬೆಳುವಾಯಿ, ಚಿತ್ರಾಪು ಕೆ. ಎಂ ಕೋಟ್ಯಾನ್, ಡಾ. ಬೋಳ ಪ್ರಭಾಕರ ಶೆಟ್ಟಿ, ಚಂದ್ರಶೇಖರ ಆರ್ ಬೆಳ್ಚಡ, ರಾಕೇಶ್ ಭಂಡಾರಿ, ಮಹೇಶ್ ಕಾರ್ಕಳ, ತುಳಸಿದಾಸ್ ಅಮೀನ್, ಸಿ ಎಸ್ ಗಣೇಶ್ ಶೆಟ್ಟಿ, ನ್ಯಾ, ಸಂತೋಶ್ ಕುಮಾರ್ ಹೆಗ್ಡೆ, ಹಿರಿಯಡ್ಕ ಮೋಹನ್ ದಾಸ್, ಫೆಲಿಕ್ಸ್ ಡಿ ಸೋಜಾ, ರವಿ ದೇವಾಡಿಗ, ದೇವದಾಸ್ ಕುಲಾಲ್, ಜಿ. ಟಿ. ಆಚಾರ್ಯ ಮತ್ತು ಸುರೇಂದ್ರ ಮೆಂಡನ್, ಕೋಶಾಧಿಕಾರಿ ಪ್ರಭಾಕರ ಬಂಗೇರ ಕಾರ್ಕಳ, ಮೊದಲಾದವರು ಸಹಕರಿಸಿದರು.
ಮುಂಬಯಿಯಿಂದ ಅನೇಕರು ತಮ್ಮ ಸ್ವಂಥ ಖರ್ಚಿನಿಂದ ಜಿಲ್ಲೆಗಳ ಮೇಲಿನ ಪ್ರೀತಿಯಿಂದ ಇಲ್ಲಿಗೆ ಬಂದಿದ್ದು ನಿಜಕ್ಕೂ ಅವರನ್ನು ಅಭಿನಂದಿಸಬೇಕು. ನಮ್ಮ ಸಮಿತಿಯಲ್ಲಿ ಉನ್ನತ ಮಟ್ಟದ ವ್ಯಕ್ತಿತ್ವವನ್ನು ಹೊಂದಿದ ಸದಸ್ಯರಿದ್ದು ಇದೀಗ ವಿದೇಶದಲ್ಲಿಯೂ ನಾವೂ ಸಮಿತಿ ರಚಿಸಿದ್ದು ನಮ್ಮನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ – ನಿತ್ಯಾನಂದ ಡಿ. ಕೋಟ್ಯಾನ್, ಅಧ್ಯಕ್ಷರು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
ಪ್ರತೀ ವರ್ಷ ಕೋಟೆಗಟ್ಟಲೆ ಮಕ್ಕಳು ಕಲಿತು ಹೊರಬರುತ್ತಾರೆ. ಅವರ ಭವಿಷ್ಯದ ಬಗ್ಗೆ ಚಿಂತಿಸಬೇಕಾಗಿದೆ. ಇಲ್ಲಿ ಸೇರಿದ ಎಲ್ಲರೂ ಕಷ್ಟ ಪಟ್ಟು ಹಣ ಸಂಪಾದಿಸಿ ಇದೀಗ ಜಿಲ್ಲೆಯ ಅಭಿವೃದ್ದಿಗೆ ಹೊರಟಿದ್ದೀರಿ. ನಮ್ಮ ಜಿಲ್ಲೆ ರಾಜ್ಯ ಹಾಗೂ ದೇಶ ಅಭಿವೃದ್ದಿಯಾಗ ಬೇಕಾಗಿದೆ– ಸಮಿತಿಯ ರಾಜ್ಯ ಸಂಚಾಲಕ ಕೆ. ಪಿ. ಜಗದೀಶ್ ಅಧಿಕಾರಿ
ಈ ಸಮಿತಿಯಲ್ಲಿ ಎಲ್ಲಾ ಧರ್ಮದವರಿದ್ದಾರೆ. ನಾರಾಯಣ ಗುರುಗಳ ತತ್ವವನ್ನು ಈ ಸಮಿತಿ ಅನುಸರಿಸುತ್ತಿದೆ. ದೇವರಿಗೆ ಜಾತಿಮತವಿಲ್ಲ, ಒಗ್ಗಟ್ಟಿದ್ದಲ್ಲಿ ನಾವು ಸಾಧಿಸಬಹುದು. ಸರಕಾರವು ಖಂಡಿತವಾಗಿಯು ನಮ್ಮೊಂದಿಗಿದೆ- ದುಬೈನ ಕೈಗಾರಿಕೋದ್ಯಮಿ ಡಾ. ಡೇವಿಡ್ ಫ್ರಾಂಕ್ ಫೆರ್ನಾಂಡಿಸ್,
ನಮ್ಮ ಜಿಲ್ಲೆಯವರು ಬುದ್ದಿವಂತರು, ಶ್ರೀಮಂತರಾಗಿದ್ದು ನಾವೆಲ್ಲರೂ ಸೇರಿ ಉತ್ತಮ ಜಿಲ್ಲೆಗಳಾಗಿ ಪರಿವರ್ತಿಸೋಣ. ಮುಂದೆ ನಾನೂ ಜಯಕೃಷ್ಣ ಶೆಟ್ಟಿಯವರೊಂದಿಗೆ ಕ್ರೀಯಾಶೀಲನಾಗುತ್ತೇನೆ – ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ
ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡುವ ಕಾರ್ಯದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ನಮ್ಮೊಂದಿಗೆ ಸಹಕರಿಸುವಂತಾಗಲಿ. ಮಂಗಳೂರಲ್ಲಿ ಹೂಡಿಕೆ ಮಾಡುವವರಿಗೆ ನನ್ನ ಬೆಂಬಲವಿದೆ- ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
ಮಂಗಳೂರಿನ ಹಳೆಯ ನೆನಪುಗಳನ್ನು ನೆನೆಪಿಸುವ ಕಾರ್ಯಕ್ರಮವಾಗಿದ್ದು ನನ್ನ ಶಾಲಾ ಜೀವನದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಬಗ್ಗೆ ಕೇಳಿರುವೆನು. ನಿಮ್ಮ ಹೋರಾಟ ಇತರರಿಗೂ ಪ್ರೇರಣದಾಯಕವಾಗಿದೆ. ನಿಮ್ಮ ಸಮಿತಿಯ ಸದಸ್ಯನಂತೆ ನಾನು ಯಾವಾಗಲು ನಿಮ್ಮೊಂದಿಗಿರುವೆನು- ಶಾಸಕ ವೇದವ್ಯಾಸ ಕಾಮತ್





