ಕಾರ್ಕಳದ ಶೈನಿ ಅಸ್ಮಾ ಸಲ್ಡಾನಾ: ಉಡುಪಿ ಜಿಲ್ಲೆಯ ಮೊದಲ ಮಹಿಳಾ ಕಮರ್ಷಿಯಲ್ ಪೈಲಟ್
ಕಾರ್ಕಳ, ಆ. 12: ಪೈಲಟ್ ಆಗಬೇಕೆಂಬ ಬಾಲ್ಯದ ಕನಸನ್ನು ನನಸಾಗಿಸಿಕೊಂಡ ಕಾರ್ಕಳ ತಾಲೂಕಿನ ಕೌಡೂರಿನ ಶೈನಿ ಅಸ್ಮಾ ಸಲ್ಡಾನಾ ಅವರು ಕಮರ್ಷಿಯಲ್ ಪೈಲಟ್ ಲೈಸೆನ್ಸ್ (CPL) ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯಲ್ಲಿ ಈ ಸಾಧನೆ ಮಾಡಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಂಗನಪಲ್ಕೆ, ಕೌಡೂರಿನ ಅಶೋಕ್ ಜಾಕೋಬ್ ಸಲ್ಡಾನಾ ಹಾಗೂ ಮರಿಯಾ ಗ್ರೆಟ್ಟಾ ಸಲ್ಡಾನಾ ದಂಪತಿಯ ಪುತ್ರಿಯಾಗಿರುವ ಶೈನಿ, ತಮ್ಮ ಶಾಲಾ ಹಾಗೂ ಪದವಿಪೂರ್ವ ಶಿಕ್ಷಣವನ್ನು ಕಾರ್ಕಳದ ಕ್ರೈಸ್ಟ್ ಕಿಂಗ್ ಎಜ್ಯುಕೇಷನಲ್ ಇನ್‌ಸ್ಟಿಟ್ಯೂಷನ್‌ನಲ್ಲಿ ಪೂರ್ಣಗೊಳಿಸಿದ್ದಾರೆ.
ಬಾಲ್ಯದಿಂದಲೇ ವಿಮಾನಯಾನ ಕ್ಷೇತ್ರದತ್ತ ಆಕರ್ಷಿತರಾಗಿದ್ದ ಶೈನಿ, ಪೈಲಟ್ ಆಗಬೇಕೆಂಬ ದೃಢ ಸಂಕಲ್ಪದೊಂದಿಗೆ ಬೆಂಗಳೂರಿನಲ್ಲಿ ನಡೆದ ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ (IGRUA) ಪ್ರವೇಶ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ತೇರ್ಗಡೆಯಾದರು. ಬಳಿಕ ಉತ್ತರ ಪ್ರದೇಶದ ಫುರ್ಸತ್‌ಗಂಜ್‌ನಲ್ಲಿರುವ ಐಜಿಆರ್‌ಯುಎ ಸಂಸ್ಥೆಯಲ್ಲಿ 2023ರ ಆಗಸ್ಟ್‌ನಿಂದ ವೃತ್ತಿಪರ ಪೈಲಟ್ ತರಬೇತಿ ಪಡೆದರು.
ತರಬೇತಿಯ ವಿವಿಧ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅವರು ಇದೀಗ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಬಹುಕಾಲದ ಕನಸನ್ನು ನನಸಾಗಿಸಿಕೊಂಡಿರುವ ಶೈನಿ, ವಿಮಾನಯಾನ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಉಡುಪಿ ಜಿಲ್ಲೆಯ ಯುವತಿಯರಿಗೆ ಪ್ರೇರಣೆಯಾಗಿದ್ದಾರೆ.
ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಶೈನಿಯವರ ಸಾಧನೆ ವಿಶೇಷ ಗಮನ ಸೆಳೆದಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಯುವತಿಯೊಬ್ಬರು ದೃಢ ಸಂಕಲ್ಪ, ಪರಿಶ್ರಮ ಮತ್ತು ನಿರಂತರ ತರಬೇತಿಯ ಮೂಲಕ ವೃತ್ತಿಪರ ಪೈಲಟ್ ಆಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿಯಾಗಿದೆ.
ಶೈನಿಯವರ ಈ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು, ಶಿಕ್ಷಕರು ಹಾಗೂ ಕಾರ್ಕಳದ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರದ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.
ವರದ





