ಅಯೋಧ್ಯೆ: ಗಣರಾಜ್ಯೋತ್ಸವ ದಿನ ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ

ಅಯೋಧ್ಯೆ: ಬಾಬ್ರಿ ಮಸೀದಿಗೆ ಬದಲಿಯಾಗಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ನೀಲನಕ್ಷೆ ಸಿದ್ಧವಾಗುತ್ತಿದ್ದು ಇದೇ ಶನಿವಾರ ಅನಾವರಣಗೊಳ್ಳಲಿದೆ. ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮುಂದಿನ ತಿಂಗಳು ಜನವರಿಯ ಗಣರಾಜ್ಯೋತ್ಸವ ದಿನ ನೆರವೇರಲಿದೆ ಎಂದು ಮಸೀದಿ ನಿರ್ಮಾಣದ ಟ್ರಸ್ಟ್ ತಿಳಿಸಿದೆ.

ಬಾಬ್ರಿ ಮಸೀದಿಗೆ ಬದಲಾಗಿ ನಿರ್ಮಿಸಲಿರುವ ಮಸೀದಿಗೆ ಅಯೋಧ್ಯೆಯಲ್ಲಿ 5 ಎಕರೆ ಜಮೀನನ್ನು ಮೀಸಲಿಡಲಾಗಿದ್ದು, 7 ದಶಕಗಳ ಹಿಂದೆ ಜಾರಿಗೆ ಬಂದ ಭಾರತದ ಸಂವಿಧಾನದ ದಿನವೇ ಶಂಕುಸ್ಥಾಪನೆ ನೆರವೇರಲಿದೆ. ನಮ್ಮ ಸಂವಿಧಾನ ಬಹುತ್ವವನ್ನು ಆಧಾರವಾಗಿಟ್ಟುಕೊಂಡಿದೆ, ಹೀಗಾಗಿ ಅದೇ ದಿನ ಶಂಕುಸ್ಥಾಪನೆ ನೆರವೇರಲಿದೆ ಎಂದು ಇಂಡೊ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಕಾರ್ಯದರ್ಶಿ ಅತರ್ ಹುಸೇನ್ ತಿಳಿಸಿದ್ದಾರೆ.

ಬಾಬ್ರಿ ಮಸೀದಿಗೆ ಬದಲಾಗಿ ನಿರ್ಮಾಣಗೊಳ್ಳಲಿರುವ ಮಸೀದಿಗೆ 6 ತಿಂಗಳ ಹಿಂದೆ ಸುನ್ನಿ ವಕ್ಪ್ ಬೋರ್ಡ್ ಐಐಸಿಎಫ್ ಸ್ಥಾಪಿಸಲಾಗಿತ್ತು.

ಮಸೀದಿ ಸಂಕೀರ್ಣ ನಿರ್ಮಾಣಕ್ಕೆ ನೀಲನಕ್ಷೆ ಸಿದ್ದವಾಗಿದ್ದು ಅದರಲ್ಲಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಅಡುಗೆಮನೆ, ಲೈಬ್ರೆರಿ ಇರುತ್ತದೆ, ಅದನ್ನು ಐಐಸಿಎಫ್ ಇದೇ 19ರಂದು ಅನಾವರಣಗೊಳಿಸಲಿದೆ. ಮಸೀದಿಯೊಳಗೆ ಒಂದು ಬಾರಿಗೆ 2 ಸಾವಿರ ಮಂದಿ ಸೇರುವ ಸಾಮರ್ಥ್ಯವಿರುತ್ತದೆ, ದುಂಡಗಿನ ಆಕಾರದಲ್ಲಿ ಮಸೀದಿಯ ರಚನೆಯಿರುತ್ತದೆ ಎಂದು ಮುಖ್ಯ ವಾಸ್ತುಶಿಲ್ಪಿ ಪ್ರೊ.ಎಸ್ ಎಂ ಅಖ್ತರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ 9 ರಂದು ಸುಪ್ರೀಂ ಕೋರ್ಟ್ ಅಯೋಧ್ಯೆಯ ವಿವಾದಿತ ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಸ್ಥಳದಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತ್ತು. ಸುನ್ನಿ ವಕ್ಫ್ ಮಂಡಳಿಗೆ ಕಟ್ಟಡ ನಿರ್ಮಿಸಲು ಪರ್ಯಾಯವಾಗಿ ಐದು ಎಕರೆ ಜಾಗವನ್ನು ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತು. ಉತ್ತರ ಪ್ರದೇಶದ ಪಟ್ಟಣದ ಪ್ರಮುಖ ಸ್ಥಳದಲ್ಲಿ ಹೊಸ ಮಸೀದಿ ನಿರ್ಮಾಣಕ್ಕೆ ಉತ್ತರ ಪ್ರದೇಶ ಸರ್ಕಾರ 5 ಎಕರೆ ಜಮೀನನ್ನು ಅಯೋಧ್ಯೆಯ ಸೊಹವಲ್ ತೆಹ್ಸಿಲ್ ನ ದನ್ನಿಪುರ್ ಗ್ರಾಮದಲ್ಲಿ ನೀಡಿತ್ತು.

ಹೊಸ ಮಸೀದಿ ಬಾಬರಿ ಮಸೀದಿಗಿಂತ ದೊಡ್ಡದಾಗಿರುತ್ತದೆ. 1,400 ವರ್ಷಗಳ ಹಿಂದೆ ಪ್ರವಾದಿ ತನ್ನ ಕೊನೆಯ ಧರ್ಮೋಪದೇಶದಲ್ಲಿ ಬೋಧಿಸಿದಂತೆ ಇದು ಇಸ್ಲಾಂ ಧರ್ಮದ ನಿಜವಾದ ಉತ್ಸಾಹದಲ್ಲಿ ಮಾನವೀಯತೆಗೆ ಸೇವೆ ಸಲ್ಲಿಸಲಿದೆ ಎಂದು ಅಖ್ತರ್ ಹೇಳಿದರು.
ಪುರಾತನ ರಾಮ ದೇವಾಲಯ ಇರುವ ಜಾಗದಲ್ಲಿ ಅದನ್ನು ಧ್ವಂಸಮಾಡಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿ ಕರ ಸೇವಕರು 1992ರ ಡಿಸೆಂಬರ್ ನಲ್ಲಿ ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!