ಹೊಸತಲೆಮಾರಿನ ಸಮಾಜಮುಖಿ ಜೀವನಕ್ಕೆ ಆಟಿದ ಮಿನದನ ಪ್ರೇರಣೆಯಾಗಲಿ: ಹರಿಪ್ರಸಾದ್ ರೈ

ಉಡುಪಿ: ತುಳುನಾಡು ಸೌಹಾರ್ದತೆ, ಸಮೃದ್ಧಿ, ಸಂಸ್ಕಾರವಂತಿಕೆಯ ಸಂಕೇತ. ಈ ಸತ್ಯವನ್ನು ಯುವಜನತೆಗೆ ತಿಳಿಯಪಡಿಸುವ ವಿವಿಧ ಆಯಾಮಗಳಲ್ಲಿ ಆಟಿ ತಿಂಗಳ ಕಾರ್ಯಕ್ರಮವೂ ಒಂದು. ಸಂಘಟನಾ ಪ್ರಜ್ಞೆ, ಆಹಾರ ಕ್ರಮ, ಸಮಾಜದ ರೀತಿ ನೀತಿಗಳನ್ನು ಹೊಸತಲೆಮಾರಿನವರು ಅಳವಡಿಸುವಂತಾಗಲು ಆಟಿದ ಮಿನದನದಂತಹ ಕಾರ್ಯಕ್ರಮ ಪ್ರೇರಣೆಯಾಗಲಿ ಎಂದು ಸುಮನಸಾ ರಜತ ಸಂಭ್ರಮ ಸಮಿತಿ ಅಧ್ಯಕ್ಷರಾದ ಲl ಹರಿಪ್ರಸಾದ್ ರೈ ಆಶಿಸಿದರು.

ಸುಮನಸಾ ಕೊಡವೂರು ಬಳಗದ ಮಹಿಳಾ ಸದಸ್ಯರು ಸಂಘಟಿಸಿದ್ದ ರಜತ ಸಂಭ್ರಮದ ಸರಣಿ ಕಾರ್ಯಕ್ರಮ ಪ್ರಯುಕ್ತ ಬನ್ನಂಜೆ ಶಿವಗಿರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಟಿದ ಮಿನದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜೆನ್‌ಜೀ ಎಂದು ಗುರುತಿಸಿಕೊಂಡ ಹೊಸಹುರುಪಿನ ಯುವಸಮುದಾಯಕ್ಕೆ ಅಂದಿನ ದಿನಗಳ ಮಹತ್ವಗಳ ಕುರಿತಾಗಿ ತಿಳಿದುಕೊಳ್ಳಲು ಹಳ್ಳಿಯ ಮನೆತನದ ವಾತಾವರಣ ಸೃಷ್ಟಿಸಿದ ಆಟಿದ ಮಿನದನದಂತಹ ಕಾರ್ಯಕ್ರಮ ಅನುಕರಣೀಯ ಎಂದರು.

ಸುಮನಸಾ ರಜತ ಸಂಭ್ರಮ ಸಮಿತಿ ಪದಾಧಿಕಾರಿಗಳಾದ, ನಿವೃತ್ತ ಪ್ರಾಧ್ಯಾಪಕರು ಡಾ‌. ಸುನೀತಾ ವಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಸುಕನ್ಯ ಮಾರ್ಟಿಸ್‌ರವರು ಆಟಿಕಳೆಂಜನಿಗೆ ಧಾನ್ಯ,ತರಕಾರಿ ಕಾಣಿಕೆಗಳನ್ನು ದಾನ ನೀಡುವ ಮೂಲಕ ವಿಶಿಷ್ಠವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಮ್ಮ ಮೂಲದ ಮತ್ತು ಮೌಲ್ಯದ ಸಂಗತಿಗಳನ್ನು ಅಳವಡಿಸಿಕೊಳ್ಳುವಲ್ಲಿ ಆಟಿ ಮಿನದನ ಸಹಕಾರಿಯಾಗುತ್ತದೆ. ಸಾಂಸ್ಕೃತಿಕ ಸಂಘಟನೆ ಸಮಾಜದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಮಾದರಿಯ ಕಾರ್ಯಕ್ರಮವನ್ನು ಆಯೋಜಿಸುವುದು ಶ್ಲಾಘನೀಯವೆಂದು ಡಾ. ಸುನೀತಾ. ವಿ ಯವರು ಉದ್ಘಾಟನಾ ಮಾತುಗಳನ್ನಾಡಿದರು‌.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರತ್ನಮಾಲ ಆಟಿದ ಪೊಲಬು ನುಡಿಯುತ್ತಾ, ಆಟಿ ಅನಿಷ್ಟವಲ್ಲ.. ಅದು ಅನುಭವದ ಅಮೂಲ್ಯ ತಿಂಗಳು. ತುಳುನಾಡಿನ ಪರಂಪರೆಗೆ ಜಾಗತಿಕ ಮನ್ನಣೆಯಿದೆ. ಆದರೊಂದಿಗೆ ಆಧುನಿಕವಾಗಿ ತುಳುಭಾಷೆಯೂ ಸೇರಿದಂತೆ ಇಲ್ಲಿನ ಮಾತೃ ಮೂಲ ಸಂಗತಿಗಳು ಸವಾಲನ್ನೆದುರಿಸುತ್ತಿದೆ. ಈ ಮಣ್ಣಿನ ಶಿಷ್ಟಾಚಾರಗಳನ್ನು ಗೌರವಿಸಿ,ಅದನ್ನು ಅಳವಡಿಸಿಕೊಂಡಲ್ಲಿ ಜೀವನೋದ್ಧರ ಖಂಡಿತಾ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ತುಳು ಮಹಾಕಾವ್ಯವೆಂದೆ ಪರಿಗಣಿಸಲ್ಪಟ್ಟ ಕೋಟಿಚೆನ್ನಯ ಪಾರ್ದನದ ಭಾಗಶಃವನ್ನು ಅರ್ಥವತ್ತಾಗಿ ನುಡಿದ ಅಪರೂಪದ ಪಾಡ್ದನ ಕಲಾವಿದರೂ ಹಾಗೂ ಹಿರಿಯ ಕೃಷಿಕರಾದ ಸುಂದರಿ ಪೂಜಾರ್ತಿಯವರಿಗೆ ತುಳುಮಣ್ಣಿನ ಮನೆ ಮರ್ಯಾದೆಯಂತೆ ಅನ್ನದ ಋಣದ ನೆನಪಿನಲ್ಲಿ ಅಕ್ಕಿ ಮುಡಿಯೊಂದಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಜತ ಸಮಿತಿಯ ಗೌರವ ಸಲಹೆಗಾರ ರಂಜನ್ ಕಲ್ಕೂರ್, ಸುಮನಸಾ ಸಂಚಾಲಕರಾದ ಭಾಸ್ಕರ ಪಾಲನ್, ಗೌರವಾಧ್ಯಕ್ಷರಾದ ಎಂ ಎಸ್ ಭಟ್ ಉಪಸ್ಥಿತರಿದ್ದರು.
ಸುಮನಸಾ ಅಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರು ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಧನ್ಯವಾದ ಸಲ್ಲಿಸಿದರು. ಪ್ರಸ್ತಾವನೆಯನ್ನು ಪಾಡ್ದನದ ರೂಪದಲ್ಲಿ ಕಾರ್ತಿಕ್ ಪ್ರಭು ಮತ್ತು ವಸುಪ್ರದಾ ಪ್ರಸ್ತುತಪಡಿಸಿದರು ಹಾಗೂ ವಿವಿಧ ಖಾದ್ಯ ತಯಾರಿ ಕುರಿತ ಭಾವಗೀತೆಯನ್ನು ಶ್ರೀಮತಿ ಗೀತಾ ಪಾಲನ್ ಹಾಡಿದರು. ಪ್ರಜ್ಞಾಶ್ರೀ ನಿರೂಪಿಸಿದರು. ಔಷಧೀಯ ಗುಣವುಳ್ಳ ವಿವಿಧ ಬಗೆಯ ತಿಂಡಿತಿನಿಸು,ಊಟೋಪಚಾರ, ಹಳ್ಳಿ ಆಟಗಳು ಹಾಗೂ ಮಹಿಳಾ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಆಟಿ ಮಿನದನ ಸಂಪನ್ನಗೊಂಡಿತು.

ಇಂಚ ಇತ್ತ್ಂಡ್ ನಮ್ಮ ಇಲ್ಲ್” ಪರಿಕಲ್ಪನೆಯ ಮಿನದನದ ವೇದಿಕೆ

ಹಿಂದಿನ ಕಾಲದ ಕೂಡುಕುಟುಂಬದ ಚಿಕ್ಕದಾದ ಚೊಕ್ಕದಾದ ಮನೆಯೇ ದೈವಾರಾಧನೆ ಸೇರಿದಂತೆ ಸಂಸ್ಕಾರಯುತ ಬದುಕನ್ನು ಕಟ್ಟಿಕೊಂಡ ನೆಲೆಬೀಡಾಗಿತ್ತು. ಅದನ್ನೆ ನೆನಪಿಸುವಂತಹ ಅಡುಗೆ ಕೋಣೆಯ ಹಾಗೂ ಇತರ ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ವೇದಿಕೆಯನ್ನು ರಚಿಸಲಾಗಿತ್ತು. ಅಂದಿನವರು ಬಳಸಿದ್ದ ವಿವಿಧ ಗಾತ್ರದ ಅಡುಗೆ ಪಾತ್ರೆಗಳು,ಮಣ್ಣಿನ ,ಮರದ ವಿವಿಧ ಗಾತ್ರದ ವಸ್ತುಗಳು,ಹಾಗೂ ಇನ್ನಿತರ ಪರಿಕರಗಳಾಗಿ ಒಟ್ಟು 238 ಪಾರಂಪರಿಕ ವಸ್ತುಗಳೊಂದಿಗೆ ಸುಮನಸಾ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್‌ರವರ ನೇತೃತ್ವದಲ್ಲಿ ಮಿನದನದ ವೇದಿಕೆ ಸಜ್ಜುಗೊಳಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!