ಉಡುಪಿ: ಏಳು ಪುಟದ ಡೆತ್ ನೋಟ್ ಬರೆದು ಸೊಸೈಟಿಯ ಸಿಇಒ ಆತ್ಮಹತ್ಯೆಗೆ ಶರಣು
ಉಡುಪಿ:ಉಡುಪಿಯ ಕಲ್ಪನಾ ಟಾಕೀಸ್ ಬಳಿಯ ಸಾಯಿರಾಜ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಶೆಟ್ಟಿ ಆತ್ಮಹತ್ಯೆಗೆ ಕ್ರಿಕೆಟ್ ಬೆಟ್ಟಿಂಗ್ ಕಾರಣ ಎಂದು ತಿಳಿದುಬಂದಿದೆ.
ಕಳೆದ ನಾಲ್ಕು ವರ್ಷಗಳಿಂದ ಸೊಸೈಟಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಚಿನ್ ಸೋಮವಾರ ಆತ್ಮಹತ್ಯೆಗೂ ಮುನ್ನ ಏಳು ಪುಟಗಳ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್‌ನಿಂದ ಕೋಟ್ಯಾಂತರ ರೂ. ಕಳೆದುಕೊಂಡ ಸಚಿನ್ ತನ್ನ ಸ್ನೇಹಿತರಿಂದ ಸಾಲಪಡೆದುಕೊಂಡಿದ್ದ. ಅದನ್ನು ಹಿಂತಿರುಗಿಸಲಾಗದೆ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾಗಿ ಡೆತ್ ನೋಟಿನಲ್ಲಿ ಬರೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಅಷ್ಟಲ್ಲದೆ ತಾನು ದುಡಿಯುತ್ತಿದ್ದ ಸೊಸೈಟಿಯಲ್ಲಿ ನಾಲ್ವರು ನಿರ್ದೇಶಕರು ರಾಜಿನಾಮೆ ನೀಡಿದ್ದರಿಂದ ಗ್ತಾಹಕರು ಠೇವಣಿಗಳನ್ನು ಸೊಸೈಟಿಯಿಂದ ಹಿಂತಿರುಗಿ ಪಡೆಯಲು ಬಂದಿದ್ದರು. ಇದರಿಂದಲೂ ನೊಂದಿದ್ದರು ಎಂದು ಅವರ ನಿಕಟವರ್ತಿಗಳು ಹೇಳಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ ಮಾತ್ರವಲ್ಲದೆ ಇಸ್ಪಿಟ್ ಆಟದ ಚಟ ಹೊಂದಿದ್ದ ಸಚಿನ್ ಅದ್ರಲ್ಲೂ ಲಕ್ಷಾಂತರ ರೂ. ಕಳೆದುಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





