ಬ್ರಹ್ಮಾವರ: ಹೋಮ್ ನರ್ಸ್ ಹೆಸರಿನಲ್ಲಿ ₹1.60ಲಕ್ಷ ವಂಚನೆ- ಪ್ರಕರಣ ದಾಖಲು

ಉಡುಪಿ, ಆ.2: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯ ಆರೈಕೆಗಾಗಿ ನೇಮಿಸಿದ್ದ ಹೋಮ್ ಬ್ರದರ್ ಬ್ಯಾಂಕ್ ಖಾತೆಯಿಂದ ಯುಪಿಐ ಮೂಲಕ ಹಂತ ಹಂತವಾಗಿ ₹1.60 ಲಕ್ಷಕ್ಕೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಆರೋಪದಡಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಡ್ತಾಡಿ ಗ್ರಾಮದ ಸೈಬರ್‌ಕಟ್ಟೆಯ ಭಾಗ್ಯಲಕ್ಷ್ಮೀ ಅವರು ನೀಡಿದ ದೂರಿನ ಪ್ರಕಾರ, ಅವರ ಪತಿ ಶ್ರೀನಿವಾಸ ಪೂಜಾರಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಉತ್ತಮ ಹೋಮ್ ನರ್ಸ್‌ಗಾಗಿ ಉಡುಪಿಯ ವಿ ಕೇರ್ ಹೋಮ್ ನರ್ಸ್ ಸಂಸ್ಥೆಯನ್ನು ಸಂಪರ್ಕಿಸಿದ್ದರು. ಸೇವೆಗಾಗಿ ಮುಂಗಡವಾಗಿ ₹28,000 ಪಾವತಿಸಲಾಗಿದ್ದು, 2026ರ ಜೂನ್ 25ರಂದು ಸಂಸ್ಥೆಯಿಂದ ಸಚಿನ್ ಎಂಬಾತನನ್ನು ಹೋಮ್ ಬ್ರದರ್ ಆಗಿ ಮನೆಗೆ ಕಳುಹಿಸಲಾಗಿತ್ತು.

ಜುಲೈ 7ರಂದು ಅಗತ್ಯ ಕೆಲಸವಿದೆ ಎಂದು ಹೇಳಿ ಸಚಿನ್ ತನ್ನ ಊರಿಗೆ ತೆರಳಿದ್ದ. ಬಳಿಕ ಜುಲೈ 28ರಂದು ಶ್ರೀನಿವಾಸ ಪೂಜಾರಿ ಅವರ ಬ್ಯಾಂಕ್ ಖಾತೆಯನ್ನು ಪುತ್ರಿ ಪರಿಶೀಲಿಸಿದಾಗ, ಜೂನ್ 25ರಿಂದ ಜುಲೈ 7ರ ಅವಧಿಯಲ್ಲಿ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ಮೊಬೈಲ್ ಯುಪಿಐ ಮೂಲಕ ಹಂತ ಹಂತವಾಗಿ ಒಟ್ಟು ₹1,60,500 ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ವಿ ಕೇರ್ ಹೋಮ್ ನರ್ಸ್ ಸಂಸ್ಥೆಯನ್ನು ಸಂಪರ್ಕಿಸಿದಾಗ, ಸಚಿನ್‌ನೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಸಂಸ್ಥೆಯವರು ತಿಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಸಂಸ್ಥೆಯವರೂ ಹಾಗೂ ಸಚಿನ್ ಸೇರಿಕೊಂಡು ನಂಬಿಕೆ ದ್ರೋಹ ಎಸಗಿ ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಭಾಗ್ಯಲಕ್ಷ್ಮೀ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!