ಮಣಿಪಾಲ: ನಿಯಮ ಉಲ್ಲಂಘಿಸಿದ ಆರು ಬಾರ್‌ಗೆ ಪೊಲೀಸ್ ದಾಳಿ- ಪ್ರಕರಣ ದಾಖಲು

ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಪಬ್ ಹಾಗೂ ಬಾರ್ ಗಳಿಗೆ ಆ.1ರಂದು ರಾತ್ರಿ ವೇಳೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ನಿಯಮ ಉಲ್ಲಂಘಿಸಿದ ಆರು ಬಾರ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಹುಕ್ಕಾ ನೀಡುತ್ತಿದ್ದಾರೆ ಹಾಗೂ 21 ವರ್ಷ ಕೆಳಗಿನ ವಿದ್ಯಾರ್ಥಿಗಳಿಗೆ ಮದ್ಯ ಮಾರಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿಯಂತೆ ಉಡುಪಿ ಎರಡನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಅನುಮತಿ ಪಡೆದು ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಎಸ್ಸೈ ಶಂಭುಲಿಂಗಯ್ಯ ಎಂ.ಇ. ಹಾಗೂ ತಂಡ ಪೆರಂಪಳ್ಳಿ ರಸ್ತೆಯ ಸೆವೆನ್ತ್ ಹೆವೆನ್ ಪಬ್ ಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು ಆಗ ಬಾರ್ನಲ್ಲಿ ಆರು ಮಂದಿ, ಎಸ್ಸೈ ತಿಮ್ಮೇಶ್ ಬಿ.ಎನ್. ಹಾಗೂ ತಂಡ ಈಶ್ವರ ನಗರದ ಸಾಯಿಸಾಗರ್ ಬಾರ್ಗೆ ದಾಳಿ ಮಾಡಿದ್ದು, ಆಗ 14 ಮಂದಿ, ಮಹಿಳಾ ಪೊಲೀಸ್ ಠಾಣೆಯ ಎಸ್ಸೈ ಶ್ರೀಶೈಲ ಡಿ.ಎಂ. ಹಾಗೂ ತಂಡ ಮಣಿಪಾಲದ ಡೌನ್ ದ ರೋಡ್ ಬಾರ್ಗೆ ದಾಳಿ ಮಾಡಿ ಪರಿಶೀಲಿಸಿದಾಗ 15 ಮಂದಿ ಹಾಗೂ ಮಣಿಪಾಲದ ಟೈಗರ್ ಸರ್ಕಲ್ ಬಳಿಯ ಡೆಕ್ಸರ್ ಬಾರ್ಗೆ ದಾಳಿ ಮಾಡಿದಾಗ 21 ಮಂದಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕಂಡುಬಂದಿದ್ದಾರೆ.

ಮಲ್ಪೆ ಎಸ್ಸೈ ಅನೀಲ್ ಕುಮಾರ ಡಿ. ಹಾಗೂ ತಂಡ ಈಶ್ವರನಗರದ ಡಿ.ಟಿ ಬಾರ್ಗೆ ಮಾಡಿ ಪರಿಶೀಲನೆ ನಡೆಸಿದಾಗ ಬಾರ್ನಲ್ಲಿ 7 ಮಂದಿ, ಹಿರಿಯಡ್ಕ ಎಸ್ಸೈ ಪುನೀತ್ ಕುಮಾರ್ ಬಿ.ಇ, ಹಾಗೂ ತಂಡ ಈಶ್ವರನಗರದ ಜನನಿ ಬಾರ್ಗೆ ದಾಳಿ ಮಾಡಿದಾಗ 17 ಬಾಲಕ-ಬಾಲಕಿಯರು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ ಓರ್ವ ಬಾಲಕ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕಂಡುಬಂದಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!