ವಿದ್ಯಾರ್ಥಿಗಳಲ್ಲಿ 7 ಸಾವಿರ ಎಚ್‍ಐವಿ ಪ್ರಕರಣ ಪತ್ತೆ ಎಂಬುದು ಸುಳ್ಳು: ಸಚಿವ ಯು.ಟಿ.ಖಾದರ್

ಬೆಂಗಳೂರು : ರಾಜ್ಯದ ಸುಮಾರು 7 ಸಾವಿರ ವಿದ್ಯಾರ್ಥಿಗಳಿಗೆ ಎಚ್‍ಐವಿ ಸೋಂಕು ತಗುಲಿದೆ ಮತ್ತು ಸರಕಾರವು ಕಾಲೇಜುಗಳಲ್ಲಿ ಎಚ್‍ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯು ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ನಗರದ ಆರೋಗ್ಯಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2026ರ ಎಪ್ರಿಲ್ ನಿಂದ ಜೂನ್ ವರೆಗೆ ಅಂದರೆ 3ತಿಂಗಳಲ್ಲಿ ಒಟ್ಟು 3,202 ಎಚ್‍ಐವಿ ಸೋಂಕಿತ ಪ್ರಕರಣಗಳು ದೃಢಪಟ್ಟಿದೆ. 2004ರಿಂದ ಇಲ್ಲಿಯ ವರೆಗೂ 39,028 ಎಚ್‍ಐವಿ ಸೋಂಕಿತರು 18 ರಿಂದ 35 ವಯೋಮಾನದವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಎಚ್‍ಐವಿ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶಿದಿಂದ ಮೊಬಿಲೈಸೇಷನ್ ಫಾರ್ ಏಡ್ಸ್ ಸುರಕ್ಷ(ಎಂಎಎಸ್) ಕಾರ್ಯಕ್ರಮವನ್ನು ಹಾಗೂ ಎಚ್‍ಐವಿ/ಏಡ್ಸ್ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು 8 ತಿಂಗಳ ರೆಡ್ ರಿಬ್ಬನ್ ಜಾಗೃತಿ ಅಭಿಯಾನದಲ್ಲಿ ಪ್ರತಿ ತಿಂಗಳು ವಿವಿಧ ಕಾರ್ಯಚಟುವಟಿಕಗಳನ್ನು ಹಮ್ಮಿಕೊಳ್ಳಲಾಗುವುದು.

ರಾಜ್ಯದಲ್ಲಿ ಸಾಮಾನ್ಯ ಹಾಗೂ ಅಪಾಯ ಹಂಚಿನಲ್ಲಿರುವ ಜನರಲ್ಲಿ ಸುಮಾರು 56 ಸಾವಿರ ಎಚ್‍ಐವಿ ಪರೀಕ್ಷೆಗೆ ಒಳಪಡದೆ ಉಳಿದಿರುತ್ತಾರೆ. ಆದುದರಿಂದ ತಮ್ಮ ಎಚ್‍ಐವಿ ಸ್ಥಿತಿಯನ್ನು ತಿಳಿದುಕೊಳ್ಳಲು breakfreeindia.org-HIV Self Risk Assessment QR Code scan ಅನ್ನು ಸ್ಕ್ಯಾನ್ ಮಾಡಿ, ಅಪಾಯವಿದ್ದರೆ ಎಚ್‍ಐವಿ ಪರೀಕ್ಷೆಗೆ ಒಳಪಡಲು ಸೂಚಿಸಲಾಗಿದೆ ಎಂದು ಖಾದರ್ ಮಾಹಿತಿ ನೀಡಿದರು.

ಎಚ್‍ಐವಿ ಮತ್ತು ಏಡ್ಸ್ (ತಡೆ ಮತ್ತು ನಿಯಂತ್ರಣ) ಕಾಯ್ದೆ, 2017ರ ಪ್ರಕಾರ ಯಾವುದೇ ವ್ಯಕ್ತಿಗೆ ಎಚ್‍ಐವಿ ಪರೀಕ್ಷೆ ಕಡ್ಡಾಯಗೊಳಿಸಲು ಅವಕಾಶ ಇರುವುದಿಲ್ಲ. ಆದಕಾರಣ ಕಡ್ಡಾಯಗೊಳಿಸಲಾಗಿಲ್ಲ. ಹಾಗೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಮೇಲೆ ಅಪಾಯ ಇದೆ ಎಂದು ತಿಳಿದು ಬಂದಲ್ಲಿ ಅಂತವರು ಹತ್ತಿರದ ಐಸಿಟಿಸಿಗೆ ತಪಾಸಣೆಗಾಗಿ ತೆರಳಲು ಆಪ್ ನಲ್ಲಿ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಎಚ್‍ಐವಿ ಸ್ಥಿತಿಯನ್ನು ತಿಳಿಯದೆ ಇರುವವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಸ್ಕಾಟ್ (Mascot) ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಹೆಚ್ಚು ಅಪಾಯಕಾರಿ ನಡವಳಿಕೆಯ ಗುಂಪುಗಳನ್ನು ಡೇಟಿಂಗ್ ಆಪ್ಸ್ ಮತ್ತು ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ನೀಡಿ ಎಚ್‍ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಷ್ಟೇ ಅಲ್ಲದೇ, ಎಚ್‍ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ಖಾದರ್ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!