ಮುಸ್ಲಿಮರ ಬಗ್ಗೆ ನಿಂದನಾತ್ಮಕ ಹೇಳಿಕೆ ಸಮರ್ಥಿಸಿಕೊಳ್ಳಲು ತಪ್ಪು ವೀಡಿಯೊ ತೋರಿಸಿದ ಸಿ.ಟಿ.ರವಿ

ಚಿಕ್ಕಮಗಳೂರು : ‘ಮುಲ್ಲಾಗಳಿಗೆ ಎದೆ ಸೀಳಿದರೇ ಮೂರು ಅಕ್ಷರವಿಲ್ಲ’ ಎಂಬ ನಿಂದನಾತ್ಮಕ ಹೇಳಿಕೆ ಸಮರ್ಥಿಸಿಕೊಳ್ಳಲು ಹೋಗಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ. ಎಂಟು ದಿನಗಳ ಹಿಂದೆ ಬಿಹಾರದ ರಸ್ತೆ ಅಪಘಾತದ ಬಳಿಕದ ವೀಡಿಯೋ ಒಂದನ್ನು ತೋರಿಸಿ ಅದನ್ನೇ ನೀಟ್ ಪ್ರತಿಭಟನೆ ಸಂದರ್ಭದ್ದು ಎಂಬಂತೆ ಈ ಮುಲ್ಲಾನ ಬಗ್ಗೆ ಮಾತನಾಡಿದ್ದೇನೆ ಎಂದು ಈಗ ಮುಜುಗರಕ್ಕೆ ಒಳಗಾಗಿದ್ದಾರೆ.

ರವಿವಾರ ನಗರದ ಬಸವನಹಳ್ಳಿ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವೀಡಿಯೋ ತೋರಿಸಿ ಮಾತನಾಡಿದ ಅವರು, ನಗರ ಠಾಣೆಯಲ್ಲಿ ನನ್ನ ಮೇಲೆ FIR ದಾಖಲಾಗಿದೆ. ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ನಡೆದ ಸಭೆಯಲ್ಲಿ ‘ಮುಲ್ಲಾನಿಗೂ NEET ಗೂ ಏನು ಸಂಬಂಧ’ ಎದೆ ಸೀಳಿದರೇ ಮೂರು ಅಕ್ಷರ ಮುಲ್ಲಾನಿಗೆ ಬರುವುದಿಲ್ಲ. NEET ಬಗ್ಗೆ ಮಾತನಾಡುತ್ತಾನೆಂದು ಹೇಳಿದ್ದೇನೆ’ ಆರ್ಟಿಕಲ್ 370 ರದ್ದುಪಡಿಸಿದ್ದಕ್ಕೆ ದಿಕ್ಕಾರ ಕೂಗುತ್ತಾರೆ. ಅದಕ್ಕೂ NEET ಗೂ ಏನು ಸಂಬಂಧವೆಂದು ಕೇಳಿದ್ದೇನೆ. NEET ಪ್ರತಿಭಟನೆ ನೆಪದಲ್ಲಿ ನಮ್ಮ ಸೈನಿಕರಿಗೆ ಅಪಮಾನಿಸುವ ಕೆಲಸ ಮಾಡುತ್ತಾರೆ. ಇವರು ದೇಶದ್ರೋಹಿಗಳು ಅಲ್ಲದೇ ಇನ್ಯಾರು ಎಂದು ಪ್ರಶ್ನಿಸಿದ್ದೇನೆ. ನನ್ನ ಹತ್ತಿರವೊಂದು ವೀಡಿಯೋ ಇದೆ ಎಂದು ವೀಡಿಯೋ ತೋರಿಸಿದ ಅವರು, ಈ ಮುಲ್ಲಾ ಜೀಪಿನ ಪೆಟ್ರೋಲ್ ಟ್ಯಾಂಕ್‍ ಗೆ ಬೆಂಕಿಕಡ್ಡಿ ಗೀರಿ ಬೆಂಕಿ ಹಚ್ಚಲು ಮುಂದಾಗುತ್ತಾನೆ. ಈ ಮುಲ್ಲಾನ ಬಗ್ಗೆನೇ ನಾನು ಹೇಳಿದ್ದು ಎಂದು ವೀಡಿಯೋವನ್ನು ಪ್ರದರ್ಶಿಸಿದ್ದರು.

ಜೀಪ್ ಪೆಟ್ರೋಲ್ ಟ್ಯಾಂಕ್‍ ಗೆ ಬೆಂಕಿ ಹಾಕಲು ಯತ್ನಿಸಿದ ಮುಲ್ಲಾನ ಬಗ್ಗೆ ಮಾತನಾಡಿದ್ದೇನೆ. ಈ ಮುಲ್ಲಾನ ಬಗ್ಗೆ ಮಾತನಾಡುವುದು ಅಪರಾಧವಾಗುತ್ತಾ? ಬೆಂಕಿಹಚ್ಚಲು ಮುಂದಾದ ಮುಲ್ಲಾನ ಎದೆ ಸೀಳಿದರೇ ಮೂರು ಅಕ್ಷರವಿಲ್ಲ ಎಂದು ಹೇಳುವುದು ಮುಸ್ಲಿಂರನ್ನು ಪ್ರಚೋದಿಸಿದಂತೆ ಆಗುತ್ತಾ? ಪೆಟ್ರೋಲ್ ಟ್ಯಾಂಕ್‍ ಗೆ ಬೆಂಕಿ ಹಾಕುತ್ತಿರುವ ಮುಲ್ಲಾನ ಬಗ್ಗೆ ಮಾತನಾಡಿದರೆ ನೀವು ಸಂಬಂಧವನ್ನು ಕಲ್ಪಿಸಿಕೊಂಡಿದ್ದೀರಿ? ನಿಮಗೂ ಪೆಟ್ರೋಲ್ ಟ್ಯಾಂಕ್‍ ಗೆ ಬೆಂಕಿ ಹಾಕಿದವನಿಗೂ ಸಂಬಂಧವೇನು? ಎಂದು ಪ್ರಶ್ನಿಸಿದರು. ಸಂಬಂಧವಿಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಅಪಮಾನ ಎಂಬುದನ್ನು ಹೇಗೆ ಭಾವಿಸುತ್ತಿರಿ? ಎಂದರು.

ನಾನು ಮುಸ್ಲಿಮರ ಬಗ್ಗೆ ಒಂದು ಶಬ್ಧವನ್ನು ಮಾತನಾಡಿಲ್ಲ, ಈ ವ್ಯಕ್ತಿ ಬಗ್ಗೆ ಮಾತನಾಡಿದ್ದೇನೆ. ದೇಶದ ನಾಗರಿಕ ಈ ಕೆಲಸ ಮಾಡಲ್ಲ. NEET ವಿದ್ಯಾರ್ಥಿಗಳು ಈ ಕೆಲಸ ಮಾಡಲ್ಲ. ಸಂವಿಧಾನದ ಬಗ್ಗೆ ಕಾಳಜಿ ಇದ್ದವರು ಪೆಟ್ರೋಲ್ ಟ್ಯಾಂಕ್‍ ಗೆ ಬೆಂಕಿ ಹಾಕಲ್ಲ. ಈ ಬೆಂಕಿ ಹಾಕುತ್ತಿರುವನಿಗೂ NEET ಗೂ ಏನು ಸಂಬಂಧವಿಲ್ಲ. ಇವನ ಎದೆ ಸೀಳಿದರೇ ಮೂರಕ್ಷರ ಬರಲ್ಲ, ಇವನ ಬಗ್ಗೆ ಮಾತನಾಡಿದ್ದೀನಿ. ಸಮಾಜಘಾತುಕ ಕೆಲಸ ಮಾಡುವರಿಗೆ ಧರ್ಮವಿಲ್ಲ. ಈ ಜೀಪ್‍ ಗೆ ಬೆಂಕಿ ಹಾಕುವವನಿಗೂ ನನ್ನ ಮೇಲೆ ಪ್ರಕರಣ ದಾಖಲಿಸಿದವನಿಗೂ ಸಂಬಂಧವಿದೆ. ಪೊಲೀಸ್ ಇಲಾಖೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಿ.ಟಿ.ರವಿ ಪತ್ರಿಕಾಗೋಷ್ಟಿಯಲ್ಲಿ ಪ್ರದರ್ಶಿಸಿದ ವೀಡಿಯೋ ಬಿಹಾರದ ರಸ್ತೆ ಅಪಘಾತದಿಂದ ಆಕ್ರೋಶಗೊಂಡ ಜನರು ಜೀಪಿಗೆ ಬೆಂಕಿ ಹಚ್ಚುತ್ತಿರುವ ವೀಡಿಯೋವಾಗಿದೆ. ಈ ವೀಡಿಯೋವನ್ನು ದಿಲ್ಲಿಯಲ್ಲಿ ನಡೆದ NEET ಹೋರಾಟದ ವೀಡಿಯೋ ಎಂದು ತೋರಿಸಿ ತಮ್ಮ ಪ್ರಚೋದನಕಾರಿ ಹೇಳಿಕೆಯನ್ನು ಸಮರ್ಥಿಸಿಕೊಂಡು ಸಿ ಟಿ ರವಿ ಮುಜುಗರಕ್ಕೀಡಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!