ಕಾರ್ಕಳ ಡಿವೈಎಸ್ಪಿ ಕಚೇರಿಯಲ್ಲೇ ಲಂಚಾವತರ: ಹಿರಿಯ ಪೊಲೀಸ್ ಅಧಿಕಾರಿ ಸಹಿತ ಮೂವರ ಅಮಾನತು

ಉಡುಪಿ, ಜು. 30: ಕಾರ್ಕಳದಲ್ಲಿ ಡಿವೈಎಸ್ಪಿ ಕಚೇರಿಯಲ್ಲಿ ಲಂಚಾ ಸ್ವೀಕರ ನಡೆದಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊಗಳು ಹಾಗೂ ಕೇಳಿಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ನಡೆಸಲಾದ ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಓರ್ವ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಲಭ್ಯವಾದ ಮಾಹಿತಿಯ ಪ್ರಕಾರ, ವಾರಾಹಿ ಪೈಪ್ ಲೈನ್‌ ಅಳವಡಿಕೆ ಸಂಬಂಧ ವೃತ್ತ ನಿರೀಕ್ಷಕರ ಕಚೇರಿಯಲ್ಲೇ ಹಣ ನೀಡುವ ಚೌಕಾಸಿ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊಗಳು ಹಾಗೂ ಆರೋಪಗಳನ್ನು ಪರಿಗಣಿಸಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು (Additional SP) ಪ್ರಾಥಮಿಕ ವಿಚಾರಣೆ ನಡೆಸಿದ್ದರು. ಈ ವಿಚಾರಣೆಯ ವರದಿಯ ಆಧಾರದ ಮೇಲೆ ಶಿಸ್ತು ಕ್ರಮ ಬಾಕಿ ಇರುವ ಹಿನ್ನೆಲೆಯಲ್ಲಿ ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್, ಕಾರ್ಕಳ ಪೊಲೀಸ್ ಇನ್ಸ್‌ಪೆಕ್ಟರ್ ಸಂದೀಪ್ ಹಾಗೂ ಡಿವೈಎಸ್ಪಿ ಕಚೇರಿಯ ಸಿಬ್ಬಂದಿ ಶಿವಾನಂದ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಅಮಾನತು ಕ್ರಮವು ಇಲಾಖಾ ಶಿಸ್ತು ಕ್ರಮ ಪೂರ್ಣಗೊಳ್ಳುವವರೆಗೆ ಜಾರಿಯಲ್ಲಿರಲಿದ್ದು, ಪ್ರಕರಣದ ಕುರಿತು ಇಲಾಖಾ ಮಟ್ಟದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಇಲಾಖೆಯಿಂದ ಈ ಕುರಿತು ಅಧಿಕೃತ ಪ್ರಕಟಣೆ ಅಥವಾ ಹೆಚ್ಚಿನ ವಿವರಗಳು ನಿರೀಕ್ಷಿಸಲಾಗಿದ್ದು, ತನಿಖೆಯ ಅಂತಿಮ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!