ಮಂಗಳೂರು: ನಡುರಸ್ತೆಯಲ್ಲಿ ರೌಡಿ ಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ ಶನಿವಾರ ಮಧ್ಯಾಹ್ನ 1:45ರ ಸುಮಾರಿಗೆ ನಡೆದಿದೆ.

ವಿಕ್ಕಿ ಬಪ್ಪಲ್ ತಲವಾರು ದಾಳಿಗೊಳಗಾದ ವ್ಯಕ್ತಿ. ರೌಡಿ ಶೀಟರ್ ಆಗಿರುವ ಈತ, ಮಾದಕವಸ್ತು ಮಾರಾಟದ ಕಾರಣಕ್ಕೆ ಪೊಲೀಸ್ ಕಣ್ಗಾವಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಲಾಲ್ ಬಾಗ್ ಸಿಗ್ನಲ್ ಬಳಿ ಬೈಕಿನಲ್ಲಿ ಸಂಚರಿಸುತ್ತಿದ್ದ ವಿಕ್ಕಿ ಬಪ್ಪಲ್ ನನ್ನು ಬೇರೊಂದು ಬೈಕಿನಲ್ಲಿ ಹಿಂಬಾಳಿಸಿಕೊಂಡ ಬಂದ ದುಷ್ಕರ್ಮಿಯೋರ್ವ ತಲವಾರಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ದಾಳಿಯಿಂದ ವಿಕ್ಕಿ ಬಪ್ಪಲ್ ನ ಕುತ್ತಿಗೆಯ ಬಳಿ ಆಳವಾದ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪೊಲೀಸ್ ಅಧಿಕಾರಿಗಳು ನಗರದಾದ್ಯಂತ ಚೆಕ್‌ಪೋಸ್ಟ್‌ಗಳಿಗೆ ಮಾಹಿತಿ ನೀಡಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿದ್ದು, ಮಂಗಳೂರು ಪೂರ್ವ ಉಪವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ತನಿಖೆಯ ನೇತೃತ್ವ ವಹಿಸಲಿದ್ದಾರೆ. ದಾಳಿಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ಪ್ರಾಥಮಿಕ ತನಿಖೆಗಳು ನಡೆಯುತ್ತಿವೆ.

Leave a Reply

Your email address will not be published. Required fields are marked *

error: Content is protected !!