ಡ್ರಗ್ಸ್ ವ್ಯಸನದಿಂದ ದೂರವಿರಿ- ಯುವಜನತೆಗೆ ನ್ಯಾಯಾಧೀಶ ನಿತಿನ್ ವೈ.ರಾವ್ ಕರೆ

ಉಡುಪಿ, ಜು.21: ಡ್ರಗ್ಸ್ ವ್ಯಸನವು ವ್ಯಕ್ತಿಯ ಆರೋಗ್ಯ ಮಾತ್ರವಲ್ಲದೆ ಕುಟುಂಬ, ಸಮಾಜ ಹಾಗೂ ದೇಶದ ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರುವುದರಿಂದ ಯುವಜನತೆ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್ ವೈ. ರಾವ್ ಕರೆ ನೀಡಿದರು.

ಅವರು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಆಯೋಜಿಸಿದ್ದ ‘RISE & Be A Bro’ ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮಾದಕ ವಸ್ತುಗಳ ವ್ಯಸನ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. “ಒಮ್ಮೆ ಪ್ರಯತ್ನಿಸಿದರೆ ಏನೂ ಆಗುವುದಿಲ್ಲ” ಎಂಬ ತಪ್ಪು ಕಲ್ಪನೆ, ಸ್ನೇಹಿತರ ಪ್ರಭಾವ, ಶೈಕ್ಷಣಿಕ ಒತ್ತಡ ಹಾಗೂ ಕೆಲವು ಸಿನಿಮಾಗಳಲ್ಲಿನ ತಪ್ಪು ಸಂದೇಶಗಳಿಂದ ಅನೇಕ ಯುವಕರು ಡ್ರಗ್ಸ್ ಬಲೆಗೆ ಸಿಲುಕುತ್ತಿದ್ದಾರೆ ಎಂದು ಅವರು ಎಚ್ಚರಿಸಿದರು.

ಎನ್‌ಡಿಪಿಎಸ್ (NDPS) ಕಾಯ್ದೆ ಅಡಿ ಮಾದಕ ವಸ್ತುಗಳ ಪ್ರಮಾಣಕ್ಕೆ ಅನುಗುಣವಾಗಿ ಕಠಿಣ ಶಿಕ್ಷೆ ಹಾಗೂ ದಂಡದ ಅವಕಾಶವಿದ್ದು, ವಾಣಿಜ್ಯ ಪ್ರಮಾಣದ ಡ್ರಗ್ಸ್ ಪ್ರಕರಣಗಳಲ್ಲಿ 10ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹2 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ ಎಂದು ಅವರು ವಿವರಿಸಿದರು. ಸಾರ್ವಜನಿಕರು ಪೊಲೀಸ್ ಇಲಾಖೆಯ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಿದರೆ ಉಡುಪಿ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಸಾಧ್ಯ ಎಂದರು.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಯುವಕರು ಮೊದಲು ಡ್ರಗ್ಸ್ ಬಳಕೆದಾರರಾಗಿ, ನಂತರ ಪೆಡ್ಲರ್‌ಗಳಾಗಿ ಬದಲಾಗುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. ಜಿಲ್ಲೆಯಾದ್ಯಂತ ಡ್ರಗ್ಸ್ ಮಾರಾಟ, ಸಾಗಣೆ ಅಥವಾ ಸೇವನೆ ಕುರಿತು ಮಾಹಿತಿ ನೀಡಲು ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರು ಅದರ ಮೂಲಕ ಮಾಹಿತಿ ನೀಡಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಡ್ರಗ್ಸ್‌ನಂತಹ ದುಶ್ಚಟಗಳಿಂದ ದೂರವಿರುವುದು ಪ್ರತಿಯೊಬ್ಬರ ವೈಯಕ್ತಿಕ ನಿರ್ಧಾರವಾಗಿದ್ದು, ಒಮ್ಮೆ ವ್ಯಸನಕ್ಕೆ ಒಳಗಾದರೆ ಅದರಿಂದ ಹೊರಬರುವುದು ಅತ್ಯಂತ ಕಷ್ಟಕರ ಎಂದು ಯುವಜನತೆಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ಅಶೋಕ್ ಕುಮಾರ್, ಶಿಕ್ಷಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿವಿಧ ಕಾಲೇಜುಗಳ ಪ್ರತಿನಿಧಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ಪ್ರತಿಜ್ಞಾ ವಿಧಿ ಬೋಧಿಸಿದರು

Leave a Reply

Your email address will not be published. Required fields are marked *

error: Content is protected !!