ಕರ್ನಾಟಕ ಬ್ಯಾಂಕ್‌ಗೆ ಹೆಚ್ಚುವರಿ ಸ್ವತಂತ್ರ ನಿರ್ದೇಶಕರಾಗಿ ಹಿರಿಯ ವಕೀಲ ಡಾ.ಎಂ.ಅರುಣ ಶ್ಯಾಮ್ ನೇಮಕ

ಉಡುಪಿ: ಮಂಗಳೂರಿನ ಪ್ರಧಾನ ಕಚೇರಿಯುಳ್ಳ ಕರ್ನಾಟಕ ಬ್ಯಾಂಕ್ ತನ್ನ ಆಡಳಿತ ಮಂಡಳಿಗೆ ಹಿರಿಯ ವಕೀಲ ಡಾ. ಎಂ. ಅರುಣ ಶ್ಯಾಮ್ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ (ಸ್ವತಂತ್ರ, ಕಾರ್ಯನಿರ್ವಾಹಕೇತರ ನಿರ್ದೇಶಕ) ನೇಮಕ ಮಾಡಿದೆ.

ಜುಲೈ 18ರಂದು ನಡೆದ ಬ್ಯಾಂಕ್‌ನ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ನೇಮಕಾತಿಗೆ ಅನುಮೋದನೆ ನೀಡಲಾಗಿದ್ದು, ಅದೇ ದಿನದಿಂದ ನಾಲ್ಕು ವರ್ಷಗಳ ಅವಧಿಗೆ ನೇಮಕ ಜಾರಿಯಾಗಿದೆ. ಆದರೆ, ಈ ನೇಮಕವು ಷೇರುದಾರರ ಅನುಮೋದನೆಗೆ ಒಳಪಟ್ಟಿರುತ್ತದೆ.

ಡಾ. ಅರುಣ ಶ್ಯಾಮ್ ಅವರು ಬ್ಯಾಂಕಿಂಗ್, ಕಾರ್ಪೊರೇಟ್, ಸಂವಿಧಾನ ಹಾಗೂ ಕ್ರಿಮಿನಲ್ ಕಾನೂನು ಕ್ಷೇತ್ರಗಳಲ್ಲಿ ಎರಡು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಹಿರಿಯ ವಕೀಲರಾಗಿದ್ದಾರೆ. 2020ರಿಂದ 2023ರವರೆಗೆ ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದರು. 2021ರಲ್ಲಿ ಕರ್ನಾಟಕ ಹೈಕೋರ್ಟ್ ಅವರನ್ನು ಹಿರಿಯ ವಕೀಲರಾಗಿ ಮಾನ್ಯತೆ ನೀಡಿತ್ತು.

ಕರ್ನಾಟಕ ಬ್ಯಾಂಕ್‌ನ ಆಡಳಿತ ಮಂಡಳಿಯಲ್ಲಿ ಕಾನೂನು ಹಾಗೂ ಸಾಂಸ್ಥಿಕ ಆಡಳಿತ ಕ್ಷೇತ್ರದ ಅನುಭವವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಈ ನೇಮಕ ಮಾಡಲಾಗಿದೆ ಎಂದು ಬ್ಯಾಂಕ್ ತನ್ನ ನಿಯಂತ್ರಣಾತ್ಮಕ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!