ಉಡುಪಿ ನ್ಯಾಯಾಲಯಕ್ಕೆ 4ನೇ ಬಾರಿ ಹುಸಿ ಬಾಂಬ್ ಬೆದರಿಕೆ- ಆರೋಪಿಗಳನ್ನು ಶೀಘ್ರ ಬಂಧಿಸಿ: ಹಿರಿಯ ನ್ಯಾಯವಾದಿ ಎಂ.ಶಾಂತಾರಾಮ್ ಶೆಟ್ಟಿ ಆಗ್ರಹ

ಉಡುಪಿ, ಜೂನ್ 30: ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಸತತವಾಗಿ ನಾಲ್ಕನೇ ಬಾರಿ ಹುಸಿ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿರುವ ಘಟನೆ ಅತ್ಯಂತ ಗಂಭೀರವಾಗಿದ್ದು, ಈ ಪ್ರಕರಣವನ್ನು ಪೊಲೀಸ್ ಇಲಾಖೆ ಹಾಗೂ ತನಿಖಾ ಸಂಸ್ಥೆಗಳು ಅತ್ಯುನ್ನತ ಆದ್ಯತೆಯೊಂದಿಗೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಹಿರಿಯ ನ್ಯಾಯವಾದಿ ಎಂ. ಶಾಂತಾರಾಮ್ ಶೆಟ್ಟಿ ಆಗ್ರಹಿಸಿದ್ದಾರೆ.

ಎಲ್ಲೋ ಕುಳಿತು ಇ-ಮೇಲ್‌ನಲ್ಲಿ ಬೆದರಿಕೆ ಹಾಕುವುದರಿಂದ ಆರೋಪಿಯ ವಿರುದ್ಧದ ತಕ್ಷಣ ಕ್ರಮಕೈಗೊಳ್ಳಲು ಕಷ್ಟ ಸಾಧ್ಯವಾಗಿದ್ದು, ನಮಗೆ ಸದೃಢ ಪೊಲೀಸ್ ಇಲಾಖೆಯ ಬಗ್ಗೆ ನಮಗೆ ಅಪಾರ ನಂಬಿಕೆ ಇದೆ. ಕೆಲವೊಬ್ಬರು ಇಲಾಖೆಯ ತಪ್ಪು ಸಂದೇಶದ ಮಾಹಿತಿ ಹರಡುತ್ತಿದ್ದಾರೆ. ಇದಕ್ಕೆ ಯಾರು ಗಮನ ನೀಡದಂತೆ ಮನವಿ ಮಾಡಿದ್ದಾರೆ.

ಸತತವಾಗಿ ಬರುತ್ತಿರುವ ಬೆದರಿಕೆ ಇ-ಮೇಲ್‌ಗಳಿಂದ ನ್ಯಾಯಾಲಯದ ಕಲಾಪಗಳು ಸ್ಥಗಿತಗೊಳ್ಳುತ್ತಿದ್ದು, ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಸಿಬ್ಬಂದಿ ಹಾಗೂ ನ್ಯಾಯಕ್ಕಾಗಿ ಆಗಮಿಸುವ ಸಾರ್ವಜನಿಕರು ಅನಗತ್ಯ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ನ್ಯಾಯಾಂಗದ ಅಮೂಲ್ಯ ಸಮಯ ವ್ಯರ್ಥವಾಗುವುದರ ಜೊತೆಗೆ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪೊಲೀಸ್ ಇಲಾಖೆ ಬೆದರಿಕೆ ಇ-ಮೇಲ್‌ಗಳ ಮೂಲವನ್ನು ವೈಜ್ಞಾನಿಕ ಹಾಗೂ ತಾಂತ್ರಿಕ ತನಿಖೆಯ ಮೂಲಕ ಶೀಘ್ರ ಪತ್ತೆಹಚ್ಚಿ, ಈ ಕೃತ್ಯದ ಹಿಂದಿರುವ ಆರೋಪಿಗಳನ್ನು ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇದರಿಂದ ಭವಿಷ್ಯದಲ್ಲಿ ಇಂತಹ ದುಷ್ಕೃತ್ಯಗಳಿಗೆ ಶಾಶ್ವತ ತಡೆ ಬೀಳಲಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ಜಿಲ್ಲಾ ನ್ಯಾಯಾಲಯ ಸೇರಿದಂತೆ ಪ್ರಮುಖ ನ್ಯಾಯಾಂಗ ಸಂಸ್ಥೆಗಳ ಭದ್ರತೆಯನ್ನು ಇನ್ನಷ್ಟು ಬಲಪಡಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪರಿಣಾಮಕಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಎಂ. ಶಾಂತಾರಾಮ್ ಶೆಟ್ಟಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!