ರಾಮಮಂದಿರ ಅವ್ಯವಹಾರ ಆರೋಪ-ಜು.11ರ ಟ್ರಸ್ಟ್ ಸಭೆಯಲ್ಲಿ ಚರ್ಚೆ, ಬಳಿಕ ಪ್ರತಿಕ್ರಿಯೆ: ಪೇಜಾವರ ಶ್ರೀ
ಉಡುಪಿ: ರಾಮಮಂದಿರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪಗಳ ಕುರಿತು ಸದ್ಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ರಾಮಮಂದಿರ ವಿಶ್ವಸ್ಥ ಮಂಡಳಿ ಟ್ರಸ್ಟ್‌ನ ಸದಸ್ಯರಾಗಿದ್ದು, ಜುಲೈ 11ರಂದು ಟ್ರಸ್ಟ್ ಸಭೆ ನಡೆಯಲಿದೆ. ಆ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಲಿದ್ದು, ಸಭೆಯಲ್ಲಿ ಭಾಗವಹಿಸಿದ ಬಳಿಕ ಸಂಪೂರ್ಣ ಮಾಹಿತಿ ತಿಳಿದು ತಮ್ಮ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.
200 ಕೆ.ಜಿ. ಬೆಳ್ಳಿ ದೇಣಿಗೆ ಆರೋಪದ ಕುರಿತು ಪ್ರತಿಕ್ರಿಯೆ
ಸಿಂಧಿ ಸಮುದಾಯವು 200 ಕೆ.ಜಿ. ಬೆಳ್ಳಿ ದೇಣಿಗೆ ನೀಡಿದ್ದರೂ ಸೂಕ್ತ ಗೌರವ ಹಾಗೂ ದಾಖಲೆ ನೀಡಿಲ್ಲ ಎಂಬ ಗಂಭೀರ ಆರೋಪ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ದೇಣಿಗೆ ನೀಡುವವರು ಮತ್ತು ಸ್ವೀಕರಿಸುವವರು ಇಬ್ಬರಿಗೂ ಸಮಾನ ಜವಾಬ್ದಾರಿ ಇದೆ ಎಂದರು.
“ದೊಡ್ಡ ಮಟ್ಟದ ದೇಣಿಗೆ ನೀಡಿದವರು ಸ್ಥಳದಲ್ಲೇ ಅಧಿಕೃತ ರಶೀದಿ ಪಡೆಯಬೇಕು. ದೇಣಿಗೆ ಸ್ವೀಕರಿಸಿದವರಿಗೂ ಅದನ್ನು ನೀಡುವ ಜವಾಬ್ದಾರಿ ಇದೆ. ರಶೀದಿ ನೀಡದೇ ಇದ್ದರೆ ಅದು ದೊಡ್ಡ ತಪ್ಪು. ಕೇವಲ ಬಾಯಿಮಾತಿನ ಹೇಳಿಕೆಗಳು ಉಳಿಯಬಾರದು,” ಎಂದು ಹೇಳಿದರು.
ಆರೋಪ ಮಾಡಿದವರು ಏನೋ ಒಂದು ಆಧಾರದ ಮೇಲೆ ಹೇಳಿರಬಹುದು. ಆದರೆ ಇಷ್ಟು ದೊಡ್ಡ ದೇಣಿಗೆಗೆ ಯಾವುದೇ ರಶೀದಿ ನೀಡದೇ ಇರಬಹುದು ಎಂಬುದನ್ನು ತಕ್ಷಣ ನಂಬಲು ಸಾಧ್ಯವಿಲ್ಲ ಎಂದೂ ಅವರು ಅಭಿಪ್ರಾಯಪಟ್ಟರು.
ಎಸ್‌ಐಟಿ ತನಿಖೆಗೆ ಸ್ವಾಗತ
ರಾಮಮಂದಿರಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಎಸ್‌ಐಟಿ ತನಿಖೆ ನಡೆಯುತ್ತಿರುವುದನ್ನು ಸ್ವಾಗತಿಸಿದ ಶ್ರೀಗಳು, ತಪ್ಪು ನಡೆದಿದ್ದರೆ ಅದರ ಸಂಪೂರ್ಣ ತನಿಖೆ ನಡೆಯಬೇಕು ಹಾಗೂ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
“ದೇಶ-ವಿದೇಶದ ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಸ್ಥಳದಲ್ಲಿ ಇಂತಹ ಘಟನೆ ನಡೆಯಬಾರದು. ನಡೆದದ್ದು ಸತ್ಯವಾಗಿದ್ದರೆ ಅದು ಅತ್ಯಂತ ಖಂಡನೀಯ. ಸತ್ಯಾಸತ್ಯತೆ ಶೀಘ್ರವಾಗಿ ಹೊರಬರಬೇಕು,” ಎಂದು ಹೇಳಿದರು.
ಟ್ರಸ್ಟ್ ಸಭೆಗಳಲ್ಲಿ ಸಲಹೆ ನೀಡಿದ್ದೆ
ತಾವು ಟ್ರಸ್ಟ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ, ಪ್ರತೀ ಬಾರಿ ತೆರಳಿದಾಗ ಆಡಳಿತಾತ್ಮಕ ವಿಷಯಗಳಲ್ಲಿ ಸಲಹೆಗಳನ್ನು ನೀಡುತ್ತಿದ್ದೆ. ಸಭೆಗಳಲ್ಲಿಯೂ ಹಲವು ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದೆ. “ಎಲ್ಲವೂ ಸರಿಯಾಗಿ ನಡೆಯುತ್ತಿದೆ” ಎಂದು ಸಂಬಂಧಪಟ್ಟವರು ಹೇಳುತ್ತಿದ್ದರು. ತಾವು ಪ್ರತಿದಿನ ಅಲ್ಲಿರಲು ಸಾಧ್ಯವಿಲ್ಲದ ಕಾರಣ, ಭೇಟಿ ನೀಡಿದಾಗ ಪರಿಶೀಲಿಸಿ ಸಲಹೆ ನೀಡುತ್ತಿದ್ದೆ ಎಂದು ವಿವರಿಸಿದರು.
“ನಾನು ವಿಶ್ವಾಸ ಇಟ್ಟು ಸಲಹೆ ನೀಡುತ್ತಿದ್ದೆ. ಸಂಬಂಧಪಟ್ಟವರು ಕೂಡ ವಿಶ್ವಾಸಾರ್ಹರಾಗಿರಬೇಕಾಗಿತ್ತು,” ಎಂದು ಶ್ರೀಗಳು ಹೇಳಿದರು.
ಚಂಪತ್ ರಾಯ್ ರಾಜೀನಾಮೆ ಕುರಿತು ಸ್ಪಷ್ಟನೆ
ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಟ್ರಸ್ಟ್‌ನ ಅಧಿಕೃತ ವಾಟ್ಸಾಪ್ ಗುಂಪಿನಲ್ಲಿ ಅಥವಾ ಚಂಪತ್ ರಾಯ್ ಅವರ ವೈಯಕ್ತಿಕ ಸಂಖ್ಯೆಯಿಂದ ಈ ಬಗ್ಗೆ ಯಾವುದೇ ಸಂದೇಶ ಬಂದಿಲ್ಲ ಎಂದು ಹೇಳಿದರು.
“ಇಂತಹ ಮಹತ್ವದ ಬೆಳವಣಿಗೆಗಳಿದ್ದಾಗ ಅವರು ಸಾಮಾನ್ಯವಾಗಿ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಈ ಬಾರಿ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅಲ್ಲಿ ಏನು ಬೆಳವಣಿಗೆ ನಡೆದಿದೆ ಎಂಬುದು ನನಗೂ ತಿಳಿದಿಲ್ಲ,” ಎಂದರು.
ರಾಮಸೇವೆ ಎಂದರೆ ಸಮಾಜಸೇವೆ
ರಾಮಮಂದಿರಕ್ಕೆ ಭಾರಿ ಮೊತ್ತದ ದೇಣಿಗೆ ನೀಡುವ ಬದಲು ಸಮಾಜಸೇವೆಗೆ ಆದ್ಯತೆ ನೀಡಬೇಕು ಎಂಬ ತಮ್ಮ ಹಿಂದಿನ ಅಭಿಪ್ರಾಯವನ್ನು ಶ್ರೀಗಳು ಪುನರುಚ್ಚರಿಸಿದರು.
“ನೂರು ಕೆ.ಜಿ. ಬೆಳ್ಳಿ ಕೊಡುವ ಬದಲು ಸಾವಿರ ಬಡವರಿಗೆ ಮನೆ ನಿರ್ಮಿಸಿ ಕೊಡಿ. ಅವಕಾಶವಂಚಿತರು, ದೀನ ದಲಿತರಿಗೆ ಮನೆ ಕಟ್ಟಿಕೊಡುವುದೂ ರಾಮಸೇವೆಯೇ. ನಮ್ಮ ಉದ್ಯೋಗದ ಜೊತೆಗೆ ಸಮಾಜ ಸೇವೆ ಮಾಡುವ ಮೂಲಕ ದೇವರಿಗೆ ಸಮರ್ಪಿಸಬಹುದು. ದುಃಖಿತರಿಗೆ ನೆರವಾಗುವುದೇ ನಿಜವಾದ ರಾಮಸೇವೆ,” ಎಂದು ಕರೆ ನೀಡಿದರು.
ಸರ್ಕಾರದ ತನಿಖೆಯ ಮೇಲೆ ವಿಶ್ವಾಸ
ರಾಜ್ಯ ಸರ್ಕಾರ ತನಿಖೆಯನ್ನು ಸಮರ್ಪಕವಾಗಿ ನಡೆಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಶ್ರೀಗಳು, ಸತ್ಯಾಂಶ ಹೊರಬಂದು ನ್ಯಾಯ ಸಿಗಬೇಕು ಎಂದು ಆಶಿಸಿದರು.
ಆರ್‌ಎಸ್‌ಎಸ್ ನೋಂದಣಿ ವಿಚಾರ
ಆರ್‌ಎಸ್‌ಎಸ್ ನೋಂದಣಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, “ಯಾವುದೇ ಸಂಘಟನೆಯನ್ನು ಅಧಿಕೃತವಾಗಿ ನೋಂದಣಿ ಮಾಡಿದರೆ ಅದರ ಬಗ್ಗೆ ಅನಗತ್ಯ ಆರೋಪಗಳಿಗೆ ಅವಕಾಶ ಕಡಿಮೆಯಾಗುತ್ತದೆ,” ಎಂದು ಸಂಕ್ಷಿಪ್ತವಾಗಿ ಹೇಳಿದರು.





