ಮತ್ತೆ ಮೂವರು ರೌಡಿಶೀಟರ್‌ಗಳಿಗೆ ಗಡಿಪಾರು ಆದೇಶ- ಉಡುಪಿ ಜಿಲ್ಲೆಯಲ್ಲಿ ಒಟ್ಟು 14 ರೌಡಿಗಳ ಗಡಿಪಾರು

ಉಡುಪಿ: ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಮತ್ತೊಮ್ಮೆ ಕಠಿಣ ಕ್ರಮ ಕೈಗೊಂಡಿದ್ದು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಹಾಗೂ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಒಬ್ಬ ರೌಡಿಶೀಟರ್ ಸೇರಿ ಒಟ್ಟು ಮೂವರಿಗೆ ಗಡಿಪಾರು ಆದೇಶ ಹೊರಡಿಸಲಾಗಿದೆ.

ವಿಶೇಷ ಕಾರ್ಯಾಂಗ ದಂಡಾಧಿಕಾರಿಯೂ ಆಗಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಜೂನ್ 24ರಂದು ಈ ಆದೇಶ ಹೊರಡಿಸಿದ್ದು, ಆರೋಪಿಗಳನ್ನು ಜಿಲ್ಲೆಯ ಹೊರಗಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ಪೊಲೀಸರ ಮಾಹಿತಿಯಂತೆ, ಮೊಹಮ್ಮದ್ ದಾನೀಶ್ ಮದನಿ (23), ಹಾಜುಮಾ ಮಂಜಿಲ್, ಮಾವಿನಕಟ್ಟೆ, ಗುಲ್ವಾಡಿ ನಿವಾಸಿಯಾಗಿದ್ದು, ಈತನ ವಿರುದ್ಧ ಕೊಲೆ, ಕೊಲೆಯತ್ನ ಸೇರಿದಂತೆ ವಿವಿಧ 8 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಹಾಳೆ ತೆರೆಯಲಾಗಿದೆ. ಈತನನ್ನು ಶಿವಮೊಗ್ಗ ಶಿಕಾರಿಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ಇದೇ ರೀತಿ ಕರಾಣಿ ಮುಸೀನ್ (44), ಕಂಡ್ಲೂರು, ಕಾವ್ರಾಡಿ ಗ್ರಾಮದ ನಿವಾಸಿಯಾಗಿದ್ದು, ಈತನ ವಿರುದ್ಧ 7 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧವೂ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಹಾಳೆ ತೆರೆಯಲಾಗಿದೆ. ಈತನನ್ನು ಬೀದರ್ ಜಿಲ್ಲೆಯ ಗಾಂಧಿ ಗಂಜ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಇಲಿಯಾಸ್ (36), ಪಾದೂರು ಗ್ರಾಮದ ಚಂದ್ರನಗರ ನಿವಾಸಿಯಾಗಿದ್ದು, ಈತನ ವಿರುದ್ಧ 15 ಪ್ರಕರಣಗಳು ದಾಖಲಾಗಿವೆ. ಶಿರ್ವ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಈತನನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡುವಂತೆ ಆದೇಶಿಸಲಾಗಿದೆ.

ಪೊಲೀಸರ ಪ್ರಕಾರ, ಈ ಮೂವರು ಆರೋಪಿಗಳು ಗಡಿಪಾರು ಕ್ರಮಕ್ಕೂ ಮುನ್ನ ಕೊಲೆ, ಕೊಲೆಯತ್ನ, ಪೊಲೀಸ್ ಠಾಣೆಗೆ ಕಲ್ಲೆಸೆತ, ಮನೆಕಳ್ಳತನ, ಜಾನುವಾರು ಕಳವು, ಜಾನುವಾರು ಹತ್ಯೆ ಹಾಗೂ ರೌಡಿಸಂಗೆ ಸಂಬಂಧಿಸಿದ ಹಲ್ಲೆ ಪ್ರಕರಣಗಳು ಸೇರಿದಂತೆ ಒಟ್ಟು 30 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ

ಕಳೆದ ಒಂದು ವರ್ಷದ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ರೌಡಿಸಂ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈ ಅವಧಿಯಲ್ಲಿ ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ 3 ಮಂದಿಗೂಂಡಾ ಕಾಯ್ದೆಯಡಿ 4 ಮಂದಿಯನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಲಾಗಿದ್ದುಒಟ್ಟು 14 ಮಂದಿಯ ವಿರುದ್ಧ ಗಡಿಪಾರು ಆದೇಶ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ಈ ಕ್ರಮಗಳು ಜಿಲ್ಲೆಯ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುಂದುವರಿಯಲಿವೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

error: Content is protected !!