ಉಡುಪಿ: ಪತ್ರಕರ್ತರಿಗೆ ಉಚಿತ ಆರೋಗ್ಯತಪಾಸಣಾ ಶಿಬಿರ: ಸದಸ್ಯತ್ವದ ಕಾರ್ಡ್ ವಿತರಣೆ

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ. ವಿಭಾಗ ಉಡುಪಿ, ಜಿಲ್ಲಾ ಸರ್ವೇಕ್ಷಣ ಘಟಕ (ಎನ್‌ಸಿಡಿ), ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ, ಆದರ್ಶ ಆಸ್ಪತ್ರೆ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ ಇವುಗಳ ಸಹಯೋಗದೊಂದಿಗೆ ಪತ್ರಕರ್ತರಿಗೆ ಉಚಿತ ಆರೋಗ್ಯ ಶಿಬಿರವನ್ನು ಬುಧವಾರ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಂಘದ ೨೦೨೬-೨೭ನೇ ಸಾಲಿನ ಸದಸ್ಯತ್ವ ಕಾರ್ಡ್‌ಗಳನ್ನು ವಿತರಿಸಲಾಯಿತು.

ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್ ಮಾತನಾಡಿ, ಒತ್ತಡದ ವೃತ್ತಿ ಬದುಕಿನಲ್ಲಿರುವ ಪತ್ರಕರ್ತರು ದಿನಕ್ಕೆ 45ನಿಮಿಷ ವ್ಯಾಯಮ, ವಾಕಿಂಗ್‌ಗೆ ಮೀಸಲಿರಿಸಬೇಕು. ಈ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಯನ್ನು ಮಾಡಬೇಕು ಎಂದು ಹೇಳಿದರು.

ವಾರ್ತಾಧಿಕಾರಿ ಮಂಜುನಾಥ್ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್, ಜಿಲ್ಲಾ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿ, ವಂದಿಸಿದರು. ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಇಸಿಜಿ, ಹಿಮೋಗ್ಲೋಬಿನ್ ಪರೀಕ್ಷೆ, ಕೊಲೆಸ್ಟ್ರಾಲ್, ಕಣ್ಣಿನ ಪರೀಕ್ಷೆಗಳನ್ನು ನಡೆಸಲಾಯಿತು. ಅಸಾಂಕ್ರಮಿಕ ರೋಗಿಗಳ ಬಗ್ಗೆ ಜೀವನ ಶೈಲಿ ಮಾರ್ಪಡು ಬಗ್ಗೆ ಮಾಹಿತಿ, ಪಿಜಿಯೋ ಥೆರಪಿ, ತಂಬಾಕು ದುಷ್ಪಾರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಶಿಬಿರದಲ್ಲಿ 100ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಿ ಪ್ರಯೋಜನ ಪಡೆದು ಕೊಂಡರು.

Leave a Reply

Your email address will not be published. Required fields are marked *

error: Content is protected !!