ಎಂಸಿಸಿ ಬ್ಯಾಂಕಿನ 22ನೇ ದೇರಳಕಟ್ಟೆ ಶಾಖೆ ಜೂ.28ಕ್ಕೆ ಉದ್ಘಾಟನೆ

ಮಂಗಳೂರು: ಎಂಸಿಸಿ ಬ್ಯಾಂಕಿನ 22ನೇ ದೇರಳಕಟ್ಟೆ ಶಾಖೆಯನ್ನು ಜೂನ್ 28, 2026 ರಂದು ಹಾಗೂ 23ನೇ ಕಟಪಾಡಿ, ಉಡುಪಿ ಶಾಖೆಯನ್ನು ಆಗಸ್ಟ್ 2, 2026 ರಂದು ಉದ್ಘಾಟಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಅವರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದೇರಳಕಟ್ಟೆ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಿಲ್ ಲೋಬೊ ವಹಿಸಲಿದ್ದಾರೆ. ಪಾನೀರ್ ಅವರ್ ಲೇಡಿ ಆಫ್ ಮರ್ಸಿ ಚರ್ಚ್ನ ಧರ್ಮಗುರು ವಂ| ವಿಕ್ಟರ್ ಡಿಮೆಲ್ಲೊ ಅವರು ಆಶೀರ್ವದಿಸ ಲಿದ್ದಾರೆ. ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಆರ್ಸುಲಾಯ್ನ್ ಫ್ರಾನ್ಸಿಸ್ಕನ್ ಸಭೆಯ ಸುಪೀರಿಯರ್ ಜನರಲ್ ಸಿಸ್ಟರ್ ಮಿಲ್ಲಿ ಫೆರ್ನಾಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಂ| ನಿಲೇಶ್ ಕ್ರಾಸ್ತಾ, ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು, ದಿವ್ಯಾ ಸತೀಶ್ ಶೆಟ್ಟಿ, ಅಧ್ಯಕ್ಷರು, ಕೋಟೆಕಾರ್ ಪಟ್ಟಣ ಪಂಚಾಯತ್ ಹಾಗೂ ಸಿ.ಎಂ. ಸತ್ತಾರ್, ಮಾಜಿ ಅಧ್ಯಕ್ಷರು, ಬೆಳ್ಮ ಗ್ರಾಮ ಪಂಚಾಯತ್ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ದೇರಳಕಟ್ಟೆಯಲ್ಲಿ ಬ್ಯಾಂಕಿನ 16ನೇ ಎಟಿಎಂ ಕೂಡ ಅಂದು ಉದ್ಘಾಟನೆಗೊಳ್ಳಲಿದೆ. ಮೊರ್ಗನ್ಸ್ಗೇಟ್ ಶಾಖೆಯನ್ನು ಜುಲೈ 25 ರಂದು, ಮೂಡಬಿದಿರೆ ಶಾಖೆಯನ್ನು ಆಗಸ್ಟ್ 22 ರಂದು ಸ್ಥಳಾಂತರಿಸಿ , ಕಾರ್ಕಳ ಶಾಖೆಯನ್ನು ಆಗಸ್ಟ್ 26, 2026 ರಂದು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

114 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್, 31 ಮಾರ್ಚ್ 2026ಕ್ಕೆ ಅಂತ್ಯ ಗೊಂಡ ಹಣಕಾಸು ವರ್ಷದಲ್ಲಿ ಎಲ್ಲಾ ಪ್ರಮುಖ ವ್ಯವಹಾರ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.

ಬ್ಯಾಂಕ್ ಒಟ್ಟು ವ್ಯವಹಾರ ವಹಿವಾಟಿನಲ್ಲಿ 22.89% ಬೆಳವಣಿಗೆಯೊಂದಿಗೆ ರು. 1535 ಕೋಟಿ ಮೈಲಿಗಲ್ಲನ್ನು ತಲುಪಿದೆ. ಬ್ಯಾಂಕಿನ ನಿವ್ವಳ ಮೌಲ್ಯ ರು. 83.76 ಕೋಟಿಯಿಂದ ರು. 91.80 ಕೋಟಿಗೆ ಏರಿಕೆಯಾಗಿದ್ದು, ಎನ್ಆರ್ಐ ಗ್ರಾಹಕರ ಬೆಂಬಲ ಬ್ಯಾಂಕಿನ ಬೆಳವಣಿಗೆಗೆ ಪ್ರಮುಖ ಶಕ್ತಿಯಾಗಿದೆ.

ಪ್ರಸ್ತುತ ಆಡಳಿತ ಮಂಡಳಿಯ ನೇತೃತ್ವದಲ್ಲಿ ಎಂಸಿಸಿ ಬ್ಯಾಂಕಿನ ಕಾರ್ಯವ್ಯಾಪ್ತಿ ಸಂಪೂರ್ಣ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದ್ದು, ಬ್ಯಾಂಕ್ ಸಂಪೂರ್ಣ ಕೋರ್ ಬ್ಯಾಂಕಿಂಗ್ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತಿದೆ. ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಮಾನವಾಗಿ ವಿವಿಧ ಹಣಕಾಸು ಉತ್ಪನ್ನಗಳು ಹಾಗೂ ಸೇವೆಗಳನ್ನು ಒದಗಿಸುತ್ತಿರುವ ಬ್ಯಾಂಕ್, ರಾಜ್ಯಾದ್ಯಂತ ಶಾಖಾ ಜಾಲ ವಿಸ್ತರಣೆಗೆ ಆದ್ಯತೆ ನೀಡುತ್ತಿದೆ.

2018ರಲ್ಲಿ ಸಹಕಾರ ರತ್ನ ಅನಿಲ್ ಲೋಬೊ ಮತ್ತು ಅವರ ತಂಡ ಆಡಳಿತ ವಹಿಸಿಕೊಂಡ ನಂತರ ಬ್ಯಾಂಕ್ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಠೇವಣಿಗಳು ರು. 304 ಕೋಟಿಯಿಂದ ರು. 876 ಕೋಟಿಗೆ ಏರಿಕೆಯಾಗಿದ್ದು, 188% ಬೆಳವಣಿಗೆ ದಾಖಲಿಸಿದೆ. ಸಾಲ ಮತ್ತು ಮುಂಗಡಗಳು ರು. 191 ಕೋಟಿಯಿಂದ ರು. 657 ಕೋಟಿಗೆ ಏರಿಕೆಯಾಗಿದ್ದು, 243% ಪ್ರಗತಿ ಸಾಧಿಸಿದೆ.

ಷೇರು ಬಂಡವಾಳ ರು. 13 ಕೋಟಿಯಿಂದ ರು. 34 ಕೋಟಿಗೆ ಏರಿಕೆಯಾಗಿದ್ದು, 161% ಬೆಳವಣಿಗೆ ಕಂಡಿದೆ. ಮೀಸಲು ನಿಧಿ ರು. 29 ಕೋಟಿಯಿಂದ ರು. 85 ಕೋಟಿಗೆ ಏರಿಕೆಯಾಗಿದೆ. ವ್ಯವಹಾರ ವಹಿವಾಟು ರು. 496 ಕೋಟಿಯಿಂದ ರು. 1,535 ಕೋಟಿಗೆ ತಲುಪಿ 209% ಬೆಳವಣಿಗೆ ದಾಖಲಿಸಿದೆ. ಸಿ ಆರ್ ಎಆರ್ ಅನುಪಾತವು 11.70% ರಿಂದ 16.55% ಕ್ಕೆ ಸುಧಾರಿಸಿದ್ದು, ಆಸ್ತಿಗಳ ಮೇಲಿನ ಆದಾಯ 0.56% ರಿಂದ 1.40% ಕ್ಕೆ ಏರಿಕೆಯಾಗಿದೆ.ದಕ್ಷ ಆಡಳಿತ ಮಂಡಳಿ, ಸಮರ್ಪಿತ ಸಿಬ್ಬಂದಿ ಮತ್ತು ಸಮರ್ಥ ಕಾರ್ಯತಂತ್ರದ ಯೋಜನೆಯಿಂದ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿರುವ ಎಲ್ಲಾ ನಿಯಮಗಳನ್ನು ಯಶಸ್ವಿಯಾಗಿ ಪೂರೈಸಿದೆ. 22 ವರ್ಷಗಳ ನಂತರ ಬ್ಯಾಂಕ್ ಬ್ರಹ್ಮಾವರ, ಬೆಳ್ತಂಗಡಿ, ಬೆಳ್ಮಣ್, ಬೈಂದೂರು ಮತ್ತು ಸಂತೆಕಟ್ಟೆಯಲ್ಲಿ ಹೊಸ ಶಾಖೆಗಳನ್ನು ಆರಂಭಿಸುವ ಮೂಲಕ ವಿಸ್ತರಣೆಗೆ ಚಾಲನೆ ನೀಡಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ತಿಳಿಸಿದರು.

ಎಂಸಿಸಿ ಬ್ಯಾಂಕ್ ಕಡಿಮೆ ವೆಚ್ಚದ ಲಾಕರ್ ಸೌಲಭ್ಯ, ದೇಶೀ ಹಾಗೂ ವಿದೇಶಿ ಶಿಕ್ಷಣಕ್ಕಾಗಿ ಶಿಕ್ಷಣ ಸಾಲ, ಎಮ್ಎಸ್ಎಮ್ಇ ಸಾಲ, ವಾಹನ ಸಾಲ, ಗೃಹ ಸಾಲ, ಮನೆ ದುರಸ್ತಿ, ವಿವಾಹ ಹಾಗೂ ಗೃಹೋಪಯೋಗಿ ವಸ್ತು ಗಳ ಖರೀದಿ ಸಾಲ ಸೇರಿದಂತೆ ಹಲವು ಹಣಕಾಸು ಸೇವೆಗಳನ್ನು ನೀಡುತ್ತಿದೆ. ಯಾವುದೇ ಪ್ರೊಸೆಸಿಂಗ್ ಶುಲ್ಕ ವಿಲ್ಲದೆ ಚಿನ್ನದ ಸಾಲ ಸೌಲಭ್ಯ ಹಾಗೂ ಉಚಿತ ಎಟಿಎಂ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಬ್ಯಾಂಕಿನ ಠೇವಣಿಗಳು ಆರ್’ಬಿಐ ಮಾರ್ಗಸೂಚಿಯಂತೆ ಡಿಐಸಿಜಿಸಿ ಅಡಿಯಲ್ಲಿ ವಿಮೆ ಒಳಗೊಂಡಿವೆ ಎಂದವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದ ಆ್ಯಂಡ್ರೂ ಡಿಸೋಜಾ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜಾ, ಎಲ್ರಾಯ್ ಕಿರಣ್ ಕ್ರಾಸ್ಟೊ , ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜಾ, ಆಲ್ವಿನ್ ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಪ್ರಧಾನ ವ್ಯವಸ್ಥಾಪಕ ಸುನಿಲ್ ಮಿನೇಜಸ್, ಎಂಸಿಸಿ ಬ್ಯಾಂಕ್ ಲಿಮಿಟೆಡ್ ಮಾಧ್ಯಮ ವ್ಯವಸ್ಥಾಪಕ ಟೈಟಸ್ ನೊರೊನ್ಹಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!